Tuesday, December 30, 2025

ಯೆಮೆನ್‌ ನ ಬಂದರು ನಗರ ಮುಕಲ್ಲಾ ಮೇಲೆ ಸೌದಿ ಅರೇಬಿಯಾ ಏರ್‌ಸ್ಟ್ರೈಕ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಯೆಮೆನ್‌ ಬಂದರು ನಗರವಾದ ಮುಕಲ್ಲಾ ಮೇಲೆ ಸೌದಿ ಅರೇಬಿಯಾ ಇಂದು ಏರ್‌ಸ್ಟ್ರೈಕ್‌ ಮಾಡಿದೆ. ಈ ವೇಳೆ ಯೆಮೆನ್‌ನ ಪ್ರತ್ಯೇಕವಾದಿಗಳಿಗೆ ಬೆಂಬಲ ನೀಡುತ್ತಿರುವುದು ಅತ್ಯಂತ ಅಪಾಯಕಾರಿ ಎಂದು ಯುಎಇಗೆ (UAE) ಎಚ್ಚರಿಕೆ ನೀಡಿದೆ.

ಯೆಮೆನ್‌ನಲ್ಲಿ ಆಂತರಿಕ ಸಂಘರ್ಷವಿದ್ದು ವಿವಿಧ ರಾಜಕೀಯ ಪಕ್ಷಗಳು, ಬಂಡುಕೋರರು ಅಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಕೆಲ ಪ್ರದೇಶಗಳು ಬಂಡುಕೋರರ ಕೈಯಲ್ಲಿದ್ದರೆ ಕೆಲವು ಪ್ರದೇಶ ಸರ್ಕಾರದ ನಿಯಂತ್ರಣದಲ್ಲಿದೆ.

Southern Transitional Council (STC) ಹೆಸರಿನ ರಾಜಕೀಯ ಸಂಘಟನೆ 2017 ರಲ್ಲಿ ರಚನೆಯಾಗಿದ್ದು ದಕ್ಷಿಣ ಯೆಮೆನ್‌ನಲ್ಲಿ ಪ್ರಾಬಲ್ಯವನ್ನು ಹೊಂದಿದೆ. ಈ ಸಂಘಟನೆಗೆ ಯುಎಇ ಬೆಂಬಲ ನೀಡುತ್ತಿದೆ. ಈ ಎಸ್‌ಟಿಸಿ ಇತ್ತೀಚಿಗೆ ಪೂರ್ವ ಯೆಮೆನ್‌ನಲ್ಲಿರುವ ತೈಲ ಸಮೃದ್ಧ ಹದ್ರಾಮೌಟ್ ಮತ್ತು ಅಲ್ ಪ್ರಾಂತ್ಯಗಳನ್ನು ವಶಕ್ಕೆ ಪಡೆದಿತ್ತು.
ಎಸ್‌ಟಿಸಿಗೆ ಬಲ ತುಂಬಲು ಮುಕಲ್ಲಾ ಬಂದರಿಗೆ ಶಸ್ತ್ರಾಸ್ತ್ರಗಳು ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಯುಎಇ ಕಳುಹಿಸಿಕೊಟ್ಟಿತ್ತು. ಶಸ್ತ್ರಾಸ್ತ್ರ ಕಳುಹಿಸಿದ ಹಿನ್ನೆಲೆಯಲ್ಲಿ ಸಿಟ್ಟಾದ ಸೌದಿ ಅರೇಬಿಯಾ ಈಗ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿರುವ ಮುಕಲ್ಲಾ ನಗರದ ಮೇಲೆಯೇ ಬಾಂಬ್‌ ದಾಳಿ ನಡೆಸಿದೆ.

ಇದರ ಬೆನ್ನಲ್ಲೇ ಯೆಮೆನ್ ಅಧ್ಯಕ್ಷೀಯ ಮಂಡಳಿಯು ಯುಎಇ ರಕ್ಷಣಾ ಒಪ್ಪಂದವನ್ನು ರದ್ದುಗೊಳಿಸಿದೆ. ಯೆಮೆನ್‌ನ ಆಂತರಿಕ ವ್ಯವಹಾರಗಳಲ್ಲಿ ಹಸ್ತಕ್ಷೇಪ ಮಾಡುವುದನ್ನು ತಡೆಯಬೇಕು ಮತ್ತು ದೇಶದ ಹೊರಗೆ ಕಾರ್ಯನಿರ್ವಹಿಸುವ ಯಾವುದೇ ಸಂಘಟನೆಗಳಿಗೆ ಮಿಲಿಟರಿ ಮತ್ತು ಲಾಜಿಸ್ಟಿಕ್‌ ಬೆಂಬಲ ನೀಡುವುದನ್ನು ಯುಎಇ ತಕ್ಷಣವೇ ನಿಲ್ಲಿಸಬೇಕು ಎಂದು ಉನ್ನತ ರಾಜಕೀಯ ಮತ್ತು ಮಿಲಿಟರಿ ನಾಯಕರನ್ನು ಒಳಗೊಂಡ ಮಂಡಳಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಸೌದಿ ಅರೇಬಿಯಾ ಯೆಮೆನ್‌ ಜೊತೆ ಗಡಿಯನ್ನು ಹಂಚಿಕೊಂಡಿದ್ದರೂ ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತಿಲ್ಲ. ಭೌಗೋಳಿಕ ರಾಜಕೀಯ, ಭದ್ರತೆ ಮತ್ತು ಆರ್ಥಿಕ ಹಿತಾಸಕ್ತಿಗಾಗಿ ಯೆಮೆನ್‌ ವಿಚಾರದಲ್ಲಿ ಆಸಕ್ತಿಯನ್ನು ಹೊಂದಿದೆ. ದಕ್ಷಿಣ ಭಾಗದಲ್ಲಿ ಬಂಡುಕೋರರನ್ನು ನಿಯಂತ್ರಿಸಿ ಸಮುದ್ರ ವ್ಯಾಪಾರ ಮಾರ್ಗದಲ್ಲಿ ಯಾವುದೇ ಸಮಸ್ಯೆ ಆಗದೇ ಇರಲು ಯೆಮೆನ್‌ ಸರ್ಕಾರಕ್ಕೆ ಬೆಂಬಲ ನೀಡುತ್ತಿದೆ.

ಯುಎಇಗೆ ಎಚ್ಚರಿಕೆ
ಎರಡು ಹಡಗುಗಳಿಂದ ಲೋಡ್ ಮಾಡಲಾದ ಶಸ್ತ್ರಾಸ್ತ್ರಗಳು ಮತ್ತು ಮಿಲಿಟರಿ ವಾಹನಗಳನ್ನು ಗುರಿಯಾಗಿಸಿಕೊಂಡು ಸೀಮಿತ ವಾಯುದಾಳಿಯನ್ನು ನಡೆಸಲಾಗಿದೆ. ಯುಎಇಯ ಪೂರ್ವ ಕರಾವಳಿಯ ಬಂದರು ನಗರವಾದ ಫುಜೈರಾದಿಂದ ಹಡಗುಗಳು ಬಂದ ನಂತರ ಈ ದಾಳಿ ನಡೆದಿದೆ.

ಪೂರ್ವ ಯೆಮೆನ್‌ನಲ್ಲಿ ಯುಎಇ ಅಪಾಯಕಾರಿ ನಿರ್ಧಾರಗಳು ಸೌದಿ ರಾಷ್ಟ್ರೀಯ ಭದ್ರತೆಗೆ ಬೆದರಿಕೆಯನ್ನುಂಟುಮಾಡುತ್ತವೆ. ಯೆಮೆನ್‌ನಲ್ಲಿರುವ ಎಲ್ಲಾ ಪಡೆಗಳನ್ನು 24 ಗಂಟೆಗಳ ಒಳಗೆ ಹಿಂತೆಗೆದುಕೊಳ್ಳಬೇಕು. ಯೆಮೆನ್ ಬಣಗಳಿಗೆ ಮಿಲಿಟರಿ ಮತ್ತು ಆರ್ಥಿಕ ಬೆಂಬಲವನ್ನು ಕೂಡಲೇ ಸ್ಥಗಿತಗೊಳಿಸಬೇಕು ಎಂದು ಯುಎಇಗೆ ಸೌದಿ ಸೂಚಿಸಿದೆ.

error: Content is protected !!