ಹೊಸ ದಿಗಂತ ವರದಿ,ಕಲಬುರಗಿ:
ಹೊಸ ವರ್ಷದ ಕ್ಷಣಗಣನೆ ಆರಂಭವಾಗಿದ್ದು,ಈ ಹಿನ್ನೆಲೆಯಲ್ಲಿ ಕಲಬುರಗಿ ನಗರದಾದ್ಯಂತ ಸೂಕ್ತ ಬಂದೋಬಸ್ತ್ ಮಾಡಲಾಗಿದೆ.ಮಧ್ಯರಾತ್ರಿ ರಸ್ತೆ ಬದಿ ಮಧ್ಯ ಸೇವನೆ,ಮಾದಕ ವಸ್ತುಗಳ ಸೇವನೆ ಕಂಡು ಬಂದಲ್ಲಿ ಅಂತಹವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೋಲಿಸ್ ಕಮಿಷನರ್ ಡಾ.ಶರಣಪ್ಪ ಎಸ್ ಡಿ ತಿಳಿಸಿದರು.
ಹೊಸ ವರ್ಷದ ಆಚರಣೆ ಹಿನ್ನೆಲೆಯಲ್ಲಿ ಈಗಾಗಲೇ ಸೂಕ್ತ ಬಂದೋಬಸ್ತ್ ಸಲುವಾಗಿ ೨ ಡಿಸಿಪಿ,೮ ಎಸಿಪಿ, ೧೬ ಪಿಐ, ೧೮ ಪಿಎಸ್ಐ ಸೇರಿದಂತೆ ೮೫೦ ಜನ ಪೋಲಿಸ್ ಸಿಬ್ಬಂದಿಯ ನಿಯೋಜನೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಇದಲ್ಲದೆ ಪೋಲಿಸ್ ಸಿಬ್ಬಂದಿ ಹಾಗೂ ೩೦೦ ಜನ ಹೋಂ ಗಾರ್ಡ್, ೧೦ ಸಿಎಆರ್ ತುಕಡಿ ಸೇರಿದಂತೆ ೩ ಕೆಎಸ್ಆರ್ಪಿ ತುಕಡಿ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ.ಕುಡಿದು ವಾಹನ ಚಾಲನೆ, ವೀಲಿಂಗ್ ಮಾಡುವುದು, ಮಧ್ಯರಾತ್ರಿ ರಸ್ತೆಯ ಪಕ್ಕದಲ್ಲಿ ಮಧ್ಯ ಸೇವನೆ, ಮಾದಕ ವಸ್ತುಗಳ ಸೇವನೆ ಕಂಡು ಬಂದಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ನಗರದ ಪ್ರಮುಖ ವೃತ್ತಗಳಾದ ಸರ್ದಾರ್ ವಲ್ಲಭಭಾಯ್ ಪಟೇಲ್, ಸೂಪರ್ ಮಾರ್ಕೆಟ್, ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ಬಿಗಿ ಪೋಲಿಸ್ ಬಂದೋಬಸ್ತ್ ಮಾಡಲಾಗಿದೆ. ನಗರದ ಸುಮಾರು ೩೦ ವಿವಿಧ ಸ್ಥಳಗಳಲ್ಲಿ ನಾಕಾಬಂದಿ ಸ್ಥಾಪಿಸಿ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

