ಹೊಸ ದಿಗಂತ ವರದಿ,ಮಡಿಕೇರಿ:
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ರೆವ್ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ/ ಸರಬರಾಜು/ ಬಳಕೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ ವಿಶೇಷ ಕಾರ್ಯಾಚರಣೆ ನಡೆಸಿದ ಕೊಡಗು ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡು ಐದು ಮಂದಿಯನ್ನು ಬಂಧಿಸಿದ್ದಾರೆ.
ಸುಂಟಿಕೊಪ್ಪ ಕೆಇಬಿ ಬಳಿಯ ನಿವಾಸಿಗಳಾದ ತೌಶಿದ್ ಎಸ್.ಎಂ (24), ನೌಶದ್ ಎಸ್.ಎಂ(23),ಶ್ರೀರಾಮ ಕಾಲೋನಿಯ ಅದ್ವಾನ್ (25), ಮೈಸೂರು ವಿದ್ಯಾರಣ್ಯಪುರಂನ ಕ್ಸೇವಿಯರ್ (40), ಕುಶಾಲನಗರ ಗುಮ್ಮನಕೊಲ್ಲಿಯ ನೌಶೀಫ್ (23) ಬಂಧಿತ ಆರೋಪಿಗಳಾಗಿದ್ದು, ಇವರಿಂದ ಒಟ್ಟು 16.97 ಗ್ರಾಂ ಎಂಡಿಎಂಎ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ರಾಮರಾಜನ್ ಅವರು ತಿಳಿಸಿದ್ದಾರೆ.
ಡಿಸೆಂಬರ್ ತಿಂಗಳಿನಲ್ಲಿ ಜಿಲ್ಲೆ, ಹೊರಜಿಲ್ಲೆ/ ಹೊರ ರಾಜ್ಯಗಳಿಂದ ಕೊಡಗಿಗೆ ಆಗಮಿಸಿ ಹೋಂ ಸ್ಟೇ / ರೆಸಾರ್ಟ್/ ಲಾಡ್ಜ್’ಗಳಲ್ಲಿ ತಂಗುವ ಪ್ರವಾಸಿಗರಿಗೆ ರೆವ್ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ/ ಸರಬರಾಜು/ ಬಳಕೆ ಮಾಡುವುದನ್ನು ತಡೆಗಟ್ಟುವ ಸಲುವಾಗಿ ಮುಂಜಾಗ್ರತಾ ಕ್ರಮವಾಗಿ 17 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ವಿಶೇಷ ಕಾರ್ಯಾಚರಣೆ ತಂಡಗಳನ್ನು ರಚಿಸಲಾಗಿತ್ತು.
ಈ ತಂಡವು ಸುಂಟಿಕೊಪ್ಪ, ಕುಶಾಲನಗರ ಟೌನ್ ಮತ್ತು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 16 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ 57 ಆರೋಪಿಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದೆ ಎಂದು ಅವರು ತಿಳಿಸಿದ್ದಾರೆ.
ಸುಂಟಿಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2026ರ ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಸಲುವಾಗಿ ಕಾರ್ಯಕ್ರಮ ಆಯೋಜಿಸಿ ಮತ್ತು ಮಾದಕ ವಸ್ತುಗಳ ಸರಬರಾಜು/ಬಳಕೆ ಮಾಡುವ ಸಾಧ್ಯತೆ ಇರುವ ಬಗ್ಗೆ ಮುಂಚಿತವಾಗಿ ಮಾಹಿತಿ ಸಂಗ್ರಹಿಸಿ ಕಾರ್ಯಾಚರಣೆ ನಡೆಸಿ ಇಬ್ಬರು ವ್ಯಕ್ತಿಗಳನ್ನು ವಶಕ್ಕೆ ಪಡೆದಿದ್ದು, ಈ ಆರೋಪಿಗಳು ಮಾದಕ ವಸ್ತು ಸೇವನೆ ಮಾಡಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿದೆ. ಈ ಆರೋಪಿಗಳ ಮೇಲೆ ಮಾದಕ ವಸ್ತು ಬಳಕೆ/ ಸೇವನೆ ಮಾಡಿರುವ ಕುರಿತು ಪ್ರಕರಣಗಳನ್ನು ದಾಖಲಿಸಿ ಆರೋಪಿಗಳನ್ನು ದಸ್ತಗಿರಿ ಮಾಡಿ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ರಾಮರಾಜನ್ ಹೇಳಿದ್ದಾರೆ.
ಕಾರ್ಯಾಚರಣೆಯ ವಿಶೇಷ ತಂಡದಲ್ಲಿ ಸೋಮವಾರಪೇಟೆ ಉಪ ವಿಭಾಗ್ ಡಿಎಸ್ಪಿ ಚಂದ್ರಶೇಖರ್.ಪಿ, ಕುಧಾಲನಗರ ವೃತ್ತ ನಿರೀಕ್ಷಕ ದಿನೇಶ್ ಕುಮಾರ್ ಬಿ.ಎಸ್, ಕುಶಾಲನಗರ ಗ್ರಾಮಾಂತರ ಠಾಣೆಯ ಪಿಎಸ್ ಐಗಳಾದ ರಾಮಚಂದ್ರ, ಸ್ವಾಮಿ ಹೆಚ್.ಸಿ, ಸುಂಟಿಕೊಪ್ಪ ಠಾಣೆಯ ಪಿಎಸ್ಐ ಮೋಹನ್‌ರಾಜು ಪಿ., ಕುಶಾಲನಗರ ಟೌನ್ ಪಿಎಸ್ಐಗಳಾದ ಶಿವಣ್ಣ ಹೆಚ್.ಟಿ, ಗೀತಾ ಹೆಚ್.ಟಿ, ಕುಶಾಲನಗರ ಗ್ರಾಮಾಂತರ ಎಎಸ್ಐ ವೆಂಕಟೇಶ ವಿ.ಜಿ, ಡಿಂಪಲ್, ಹೆಚ್, ಸುಂಟಿಕೊಪ್ಪ ಠಾಣೆಯ ಹೊನ್ನರಾಜಪ್ಪ, ಹೆಚ್, ಪ್ರವೀಣ ಎಸ್, ಶಶಿಕುಮಾರ್, ಕುಶಾಲನಗರ ಗ್ರಾಮಾಂತರ ಠಾಣೆಯ ಜೀವನ್.ಎಂ.ಎಸ್, ಶಿವಣ್ಣ, ಕುಶಾಲನಗರ ಟೌನ್ ಠಾಣೆಯ ಸುನಿಲ್, ಶಿವರಾಜ್, ಜಾವೀದ್.ಎಂ.ಬಿ. ಪಾಲ್ಗೊಂಡಿದ್ದಾಗಿ ಅವರು ವಿವರಿಸಿದ್ದಾರೆ
ಹೋಂ ಸ್ಟೇ/ರೆಸಾರ್ಟ್/ಲಾಡ್ಜ್’ಗಳಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು/ಬಳಕೆ ಮಾಡುವುದು ಕಂಡುಬಂದಲ್ಲಿ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳ ಮಾಲಕರು ಹಾಗೂ ಮಧ್ಯವರ್ತಿಗಳು ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಮತ್ತು ಮಾಹಿತಿ ನೀಡದೇ ಮಾದಕ ವಸ್ತುಗಳನ್ನು ಮಾರಾಟ/ ಬಳಕೆ ಮಾಡಲು ಸಹಕರಿಸಿರುವುದು ಕಂಡುಬಂದಲ್ಲಿ ಹೋಂ ಸ್ಟೇ/ರೆಸಾರ್ಟ್/ಲಾಡ್ಜ್ ಗಳ ಮಾಲಕರು ಹಾಗೂ ಮಧ್ಯವರ್ತಿಗಳ ವಿರುದ್ಧ ಕಲಂ: 25 ಎನ್‌ಡಿಪಿಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಂಡು ಪರವಾನಗಿ ರದ್ದುಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಮರಾಜನ್ ಎಚ್ಚರಿಕೆ ನೀಡಿದ್ದಾರೆ.
2026ರ ಹೊಸ ವರ್ಷಾಚರಣೆಯನ್ನು ಸಂಭ್ರಮಿಸುವ ಸಲುವಾಗಿ ಜಿಲ್ಲೆ/ ಹೊರಜಿಲ್ಲೆ/ ಹೊರರಾಜ್ಯಗಳಿಂದ ಪ್ರವಾಸದ ನಿಮಿತ್ತ ಆಗಮಿಸಿ ಜಿಲ್ಲಾ ವ್ಯಾಪ್ತಿಯಲ್ಲಿನ ಹೋಂ ಸ್ಟೇ ರೆಸಾರ್ಟ್/ಲಾಡ್ಜ್ ಗಳಲ್ಲಿ ತಂಗಲು ಬರುವ ಪ್ರವಾಸಿಗರು ರೇವ್ ಪಾರ್ಟಿ ನೆಪದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಸರಬರಾಜು/ಬಳಕೆ ಮಾಡುವುದು ಕಂಡುಬಂದಲ್ಲಿ ಜಿಲ್ಲಾ ಪೊಲೀಸ್ ಕಚೇರಿ ದೂರವಾಣಿಗೆ ಸಂಖ್ಯೆ: 08272- 228300, 9480804900ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಅವರು ಸಾರ್ವಜನಿಕರಲ್ಲಿ ಕೋರಿದ್ದಾರೆ.

