ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಅವರ ಅಧಿಕೃತ ವಾಟ್ಸಾಪ್ ಸಂಖ್ಯೆಯನ್ನೇ ಹ್ಯಾಕ್ ಮಾಡಲಾಗಿದ್ದು, ಶಾಸಕರ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಲೂಟಿ ಮಾಡಲು ಸಂಚು ರೂಪಿಸಿದ್ದಾರೆ.
ವಾಟ್ಸಾಪ್ ಖಾತೆಯನ್ನು ಹ್ಯಾಕ್ ಮಾಡಿರುವ ಹ್ಯಾಕರ್ಸ್‌ಗಳು, ಶಾಸಕರ ಕಾಂಟ್ಯಾಕ್ಟ್ ಲಿಸ್ಟ್‌ನಲ್ಲಿರುವ ಹಲವು ವ್ಯಕ್ತಿಗಳಿಗೆ ಗೂಗಲ್ ಪೇ ಮೂಲಕ ತುರ್ತಾಗಿ ಹಣ ಕಳುಹಿಸುವಂತೆ ಸಂದೇಶ ರವಾನಿಸುತ್ತಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಎಚ್ಚೆತ್ತುಕೊಂಡಿರುವ ಶಾಸಕರು, ’ಯಾರೂ ಇಂತಹ ಸಂದೇಶಗಳಿಗೆ ಪ್ರತಿಕ್ರಿಯಿಸಬೇಡಿ ಮತ್ತು ಹಣ ನೀಡಬೇಡಿ’ ಎಂದು ಸಾರ್ವಜನಿಕರಲ್ಲಿ ಕಳಕಳಿಯ ಮನವಿ ಮಾಡಿದ್ದಾರೆ.
ಹೇಗೆ ಈ ಹ್ಯಾಕ್?
ಹ್ಯಾಕರ್ಸ್‌ಗಳು ಸಾಮಾನ್ಯವಾಗಿ ’ಫಿಶಿಂಗ್’ ಎಂಬ ತಂತ್ರಾಂಶದ ಮೂಲಕ ಬಳಕೆದಾರರಿಗೆ ಅಪರಿಚಿತ ಸಂಖ್ಯೆಯಿಂದ ಲಿಂಕ್ ಕಳುಹಿಸಿ ಅಥವಾ “ವಾಟ್ಸಾಪ್ ಅಪ್‌ಡೇಟ್ ಮಾಡಿ” ಎಂಬ ಆಮಿಷದ ಸಂದೇಶ ಕಳುಹಿಸುತ್ತಾರೆ. ಅಪ್ಪಿತಪ್ಪಿ ಆ ಲಿಂಕ್ ಕ್ಲಿಕ್ ಮಾಡಿದರೆ ಅಥವಾ ಮೊಬೈಲ್‌ಗೆ ಬರುವ ಒಟಿಪಿ ನೀಡಿದರೆ, ಖಾತೆ ಹ್ಯಾಕರ್ ಪಾಲಾಗುತ್ತದೆ. ಒಮ್ಮೆ ಅವರು ಲಾಗಿನ್ ಆದರೆ, ಬಳಕೆದಾರನ ಫೋನ್‌ನಿಂದ ವಾಟ್ಸಾಪ್ ಲಾಗ್ ಔಟ್ ಆಗಿ ಅತಂತ್ರ ಸ್ಥಿತಿಗೆ ತಲುಪುತ್ತದೆ.
ಈ ಹಿಂದೆ ವಂಚಕರು ಫೇಸ್‌ಬುಕ್‌ನಲ್ಲಿ ಗಣ್ಯರ ಡಿಪಿ ಕಾಪಿ ಮಾಡಿ ನಕಲಿ ಪ್ರೊಫೈಲ್ ಮೂಲಕ ಹಣ ಕೇಳುತ್ತಿದ್ದರು. ಇದು ಕೇವಲ ಹಣವಷ್ಟೇ ಅಲ್ಲದೆ, ವ್ಯಕ್ತಿಯ ಖಾಸಗಿ ಮಾಹಿತಿ ಮತ್ತು ಗೌಪ್ಯತೆಗೂ ದೊಡ್ಡ ಅಪಾಯವನ್ನು ತಂದೊಡ್ಡಿದೆ.

