Tuesday, December 30, 2025

ವನ್ಯಪ್ರಾಣಿಗಳ ಹತ್ಯೆಗೆ ಸಂಚು: ಮೂವರು ಆರೋಪಿಗಳ ಬಂಧನ, ಓರ್ವ ಪರಾರಿ

ಹೊಸ ದಿಗಂತ ವರದಿ,ಯಲ್ಲಾಪುರ :

ವನ್ಯಪ್ರಾಣಿಗಳನ್ನು ಹತ್ಯೆ ಮಾಡುವ ಉದ್ದೇಶದಿಂದ ಬಂದೂಕು ಹಾಗೂ ಇತರ ಆಯುಧಗಳೊಂದಿಗೆ ಅನುಮಾನಾಸ್ಪದವಾಗಿ ಕಾರಲ್ಲಿ ಬಂದಿದ್ದ ಮೂವರು ಆರೋಪಿಗಳನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆ ಮರೆಸಿಕೊಂಡಿದ್ದಾನೆ.

ಯಲ್ಲಾಪುರ ತಾಲೂಕಿನ ಮಂಚಿಕೇರಿ ವಲಯದ ಚಿಕ್ಕೊತ್ತಿ ಗ್ರಾಮದ ಅರಣ್ಯದಲ್ಲಿ ವನ್ಯಜೀವಿ ಹತ್ಯೆ ಮಾಡಲು ಸಂಚು ರೂಪಿಸಿ, ಬಂದೂಕು ಹಾಗೂ ಇತರ ಆಯುಧಗಳೊಂದಿಗೆ ಶಿರಸಿ-ಯಲ್ಲಾಪುರ ರಸ್ತೆಯ ತೂಕದಬೈಲ್ ಸಮೀಪ ಬಿಳಿ ಬಣ್ಣದ ಮಾರುತಿ ಜೆನ್ ಕಾರಿನಲ್ಲಿ ಬಂದಿದ್ದ ಶಿರಸಿ ತಾಲೂಕಿನ ಸೋಂದಾಕ್ರಾಸ್ ನ ಹಸನ್ ಖಾನ್ ಇಬ್ರಾಹಿಂ ಖಾನ್, ಮುಜಿಬುರ್ ರೆಹಮಾನ್ ಅಬ್ದುಲ್ ಮುತಲಿಬ್ ಸಾಬ್‌, ಸೋದೆಪೇಟೆಯ ಅಬ್ದುಲ್ ಜಬ್ಬಾರ ಹಬೀಬುರ ರೆಹಮಾನ ಸಾಬ ಎಂಬುವವರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದಾರೆ. ಇನ್ನೋರ್ವ ಆರೋಪಿ ಹೆಗಡೆಕಟ್ಟಾದ ಅಬ್ದುಲ್ ಹನ್ನನ್ ಮಹಮ್ಮದ್ ಸಾಬ್ ತಲೆಮರೆಸಿಕೊಂಡಿದ್ದಾನೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆಯನ್ನು ಉಲ್ಲಂಘಿಸಿ ಈ ಅಪರಾಧ ಕೃತ್ಯದಲ್ಲಿ ಪಾಲ್ಗೊಂಡ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದು, ಆಯುಧಗಳನ್ನು ಹಾಗೂ ಕಾರನ್ನು ವಶಕ್ಕೆ ಪಡೆದಿದ್ದಾರೆ. ಉಪ ಅರಣ್ಯ ಸಂರಕ್ಷಣಾ ಧಿಕಾರಿ ಹರ್ಷ ಬಾನು ಜೆ ಪಿ ಮಾರ್ಗದರ್ಶನದಲ್ಲಿ ಮಂಚಿಕೇರಿ ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಹಾಗೂ ಸಿಬ್ಬಂದಿಗಳು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

error: Content is protected !!