ಬೇಕಾಗುವ ಸಾಮಗ್ರಿಗಳು
ಅಕ್ಕಿ: 1 ಕಪ್ (ಬಾಸುಮತಿ ಅಥವಾ ಸೋನಾ ಮಸೂರಿ)
ಟೊಮೆಟೊ ಪ್ಯೂರಿ: 1 ಕಪ್
ಈರುಳ್ಳಿ: 1 ಮಧ್ಯಮ ಗಾತ್ರದ್ದು
ಬೆಳ್ಳುಳ್ಳಿ: 3-4 ಎಸಳು
ತರಕಾರಿ ಸ್ಟಾಕ್ ಅಥವಾ ನೀರು: 2 ಕಪ್
ಮೆಣಸಿನ ಪುಡಿ: 1 ಚಮಚ
ಜೀರಿಗೆ ಪುಡಿ: ಅರ್ಧ ಚಮಚ
ಉಪ್ಪು: ರುಚಿಗೆ ತಕ್ಕಂತೆ
ಎಣ್ಣೆ/ಬೆಣ್ಣೆ: 2 ದೊಡ್ಡ ಚಮಚ
ಕೊತ್ತಂಬರಿ ಸೊಪ್ಪು: ಅಲಂಕಾರಕ್ಕಾಗಿ
ತಯಾರಿಸುವ ವಿಧಾನ
ಮೊದಲು ಒಂದು ಪ್ಯಾನ್ನಲ್ಲಿ ಎಣ್ಣೆ ಅಥವಾ ಬೆಣ್ಣೆಯನ್ನು ಬಿಸಿ ಮಾಡಿ. ತೊಳೆದ ಅಕ್ಕಿಯನ್ನು ಅದಕ್ಕೆ ಹಾಕಿ. ಅಕ್ಕಿ ಹಗುರವಾಗಿ ಕೆಂಪು ಬಣ್ಣಕ್ಕೆ ತಿರುಗುವವರೆಗೆ ಹುರಿಯಿರಿ. ಇದು ಅನ್ನಕ್ಕೆ ಒಂದು ವಿಶಿಷ್ಟವಾದ ‘ನಟ್ಟಿ’ ಫ್ಲೇವರ್ ನೀಡುತ್ತದೆ.
ಈಗ ಹೆಚ್ಚಿದ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಹಾಕಿ ಈರುಳ್ಳಿ ಮೆತ್ತಗಾಗುವವರೆಗೆ ಹುರಿಯಿರಿ. ನಂತರ ಜೀರಿಗೆ ಪುಡಿ ಮತ್ತು ಮೆಣಸಿನ ಪುಡಿಯನ್ನು ಸೇರಿಸಿ ಚೆನ್ನಾಗಿ ಕೈಯಾಡಿಸಿ.
ಈ ಮಿಶ್ರಣಕ್ಕೆ ಸಿದ್ಧಪಡಿಸಿಟ್ಟುಕೊಂಡ ಟೊಮೆಟೊ ಪ್ಯೂರಿಯನ್ನು ಸುರಿಯಿರಿ. ಟೊಮೆಟೊ ಹಸಿ ವಾಸನೆ ಹೋಗಿ ಎಣ್ಣೆ ಬಿಡಲು ಪ್ರಾರಂಭಿಸುವವರೆಗೆ ಬೇಯಿಸಿ. ಇದು ಅನ್ನಕ್ಕೆ ಕೆಂಪು ಬಣ್ಣವನ್ನು ನೀಡುತ್ತದೆ.
ಈಗ 2 ಕಪ್ ನೀರು ಅಥವಾ ತರಕಾರಿ ಸ್ಟಾಕ್ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಒಂದು ಕುದಿ ಬಂದ ನಂತರ ಉರಿಯನ್ನು ಕಡಿಮೆ ಮಾಡಿ, ಪ್ಯಾನ್ ಮೇಲೆ ಮುಚ್ಚಳವನ್ನು ಮುಚ್ಚಿ. ಸುಮಾರು 15-20 ನಿಮಿಷಗಳ ಕಾಲ ಅಕ್ಕಿ ಮೃದುವಾಗುವವರೆಗೆ ಬೇಯಲು ಬಿಡಿ.
ಅನ್ನ ಬೆಂದ ನಂತರ ಒಲೆಯನ್ನ ಆರಿಸಿ, ಮುಚ್ಚಳವನ್ನು ತೆಗೆಯದೆ 5 ನಿಮಿಷ ಹಾಗೆಯೇ ಬಿಡಿ. ನಂತರ ಫೋರ್ಕ್ ಸಹಾಯದಿಂದ ಅನ್ನವನ್ನು ಹದವಾಗಿ ಮಿಕ್ಸ್ ಮಾಡಿ. ಮೇಲೆ ತಾಜಾ ಕೊತ್ತಂಬರಿ ಸೊಪ್ಪನ್ನು ಉದುರಿಸಿದರೆ ಘಮಘಮಿಸುವ ಸ್ಪ್ಯಾನಿಷ್ ರೈಸ್ ಸಿದ್ಧ!

