Wednesday, December 31, 2025

Myth | ಸೋಲುವ ಮನಸ್ಸಿಗೆ ಗೆಲುವಿನ ಮಂತ್ರ: ಭಗವದ್ಗೀತೆ ಓದುವುದರ 5 ಅದ್ಭುತ ಲಾಭಗಳು

ಬದುಕಿನ ಹಾದಿಯಲ್ಲಿ ದಾರಿ ತಪ್ಪಿದಾಗ, ಮನಸ್ಸು ಗೊಂದಲದ ಗೂಡಾದಾಗ ಅಥವಾ ಕರ್ತವ್ಯದ ಹಾದಿಯಲ್ಲಿ ಆಯಾಸವಾದಾಗ ನಮಗೆ ನೆನಪಾಗುವುದು ಕೃಷ್ಣಾರ್ಜುನರ ಸಂವಾದ. ಭಗವದ್ಗೀತೆ ಕೇವಲ ಒಂದು ಧಾರ್ಮಿಕ ಗ್ರಂಥವಲ್ಲ. ಅದು ಮನುಕುಲದ ಅತಿದೊಡ್ಡ ‘ಲೈಫ್ ಮ್ಯಾನುವಲ್’

ಗೀತೆಯನ್ನು ಓದುವುದರಿಂದ ನಮಗೆ ಸಿಗುವ ಲಾಭಗಳು ಕೇವಲ ಆಧ್ಯಾತ್ಮಿಕವಲ್ಲ, ಅವು ಮಾನಸಿಕ ಮತ್ತು ಪ್ರಾಯೋಗಿಕವೂ ಹೌದು. ಅವುಗಳ ಬಗ್ಗೆ ಒಂದು ಕಿರು ನೋಟ ಇಲ್ಲಿದೆ:

ಇಂದಿನ ಓಡುತಿರುವ ಜಗತ್ತಿನಲ್ಲಿ ‘ಒತ್ತಡ’ ಎಂಬುದು ಸಾಮಾನ್ಯವಾಗಿದೆ. “ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ” ಎಂಬ ಸಾಲು ನಮಗೆ ಫಲಿತಾಂಶದ ಬಗ್ಗೆ ಚಿಂತಿಸದೆ ಕೆಲಸದ ಮೇಲೆ ಗಮನ ಹರಿಸುವುದನ್ನು ಕಲಿಸುತ್ತದೆ. ಇದು ಅತಿಯಾದ ಆತಂಕವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ.

ಅರ್ಜುನನಂತೆ ನಾವೂ ಕೂಡ ಜೀವನದ ಹಾದಿಯಲ್ಲಿ “ಯಾವುದು ಸರಿ? ಯಾವುದು ತಪ್ಪು?” ಎಂಬ ಗೊಂದಲಕ್ಕೆ ಬೀಳುತ್ತೇವೆ. ಭಗವದ್ಗೀತೆಯು ಕರ್ತವ್ಯದ ಮಹತ್ವವನ್ನು ತಿಳಿಸಿಕೊಡುವ ಮೂಲಕ, ಕಠಿಣ ಸಂದರ್ಭಗಳಲ್ಲಿಯೂ ದೃಢವಾದ ಮತ್ತು ಸರಿಯಾದ ನಿರ್ಧಾರ ತೆಗೆದುಕೊಳ್ಳಲು ನಮಗೆ ಆತ್ಮಸ್ಥೈರ್ಯ ತುಂಬುತ್ತದೆ.

ಕೋಪ, ಅಸೂಯೆ, ಅತಿಯಾದ ಆಸೆಗಳು ಮನುಷ್ಯನ ಪತನಕ್ಕೆ ಕಾರಣ. ಗೀತೆಯು ‘ಸ್ಥಿತಪ್ರಜ್ಞ’ನಾಗಿರುವುದು ಹೇಗೆ ಎಂಬುದನ್ನು ಕಲಿಸುತ್ತದೆ. ಅಂದರೆ ಸೋಲು-ಗೆಲುವು, ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಬೆಳೆಯುತ್ತದೆ.

ಧ್ಯಾನ ಮತ್ತು ಮನಸ್ಸಿನ ನಿಗ್ರಹದ ಬಗ್ಗೆ ಗೀತೆಯಲ್ಲಿ ವಿಸ್ತಾರವಾಗಿ ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ವೃತ್ತಿಪರರಿಗೆ ತಮ್ಮ ಗುರಿಯತ್ತ ಏಕಾಗ್ರತೆ ವಹಿಸಲು ಇದು ಪೂರಕವಾಗಿದೆ. ಚಂಚಲವಾದ ಮನಸ್ಸನ್ನು ಗೆದ್ದವನೇ ನಿಜವಾದ ವಿಜೇತ ಎಂಬ ಸತ್ಯ ನಮಗೆ ಅರಿವಾಗುತ್ತದೆ.

ನಮಗೆ ನಮ್ಮ ಮೇಲೆಯೇ ನಂಬಿಕೆ ಇಲ್ಲದಿದ್ದಾಗ ಅಥವಾ ಜೀವನದಲ್ಲಿ ಸೋತು ಸುಣ್ಣವಾದಾಗ, ಗೀತೆಯು “ಆತ್ಮ”ದ ಅಮರತ್ವ ಮತ್ತು ಶಕ್ತಿಯನ್ನು ನೆನಪಿಸುತ್ತದೆ. ಇದು ಮನುಷ್ಯನಲ್ಲಿ ಕೀಳರಿಮೆಯನ್ನು ಹೋಗಲಾಡಿಸಿ, ಸಕಾರಾತ್ಮಕ ಆಲೋಚನೆಗಳನ್ನು ಬಿತ್ತುತ್ತದೆ.

error: Content is protected !!