ಹೊಸದಿಗಂತ ಡಿಜಿಟಲ್ ಡೆಸ್ಕ್:
ಚೀನಾ ಮತ್ತು ಅಮೆರಿಕದಂತಹ ರಾಷ್ಟ್ರಗಳು ತಮಗೆ ಸಂಬಂಧವಿಲ್ಲದ ವಿಷಯಗಳಲ್ಲಿ ಕ್ರೆಡಿಟ್ ಪಡೆಯಲು ಹವಣಿಸುತ್ತಿರುವುದು ಈಗ ಜಾಗತಿಕ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಾವೇ ತಣ್ಣಗಾಗಿಸಿದ್ದು ಎಂದು ಹೇಳಿಕೊಳ್ಳುವ ಮೂಲಕ ಚೀನಾ ಈಗ ಭಾರತದಿಂದ ಮುಖಭಂಗ ಅನುಭವಿಸಿದೆ.
ಬೀಜಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ, ಜಗತ್ತಿನಾದ್ಯಂತ ನಡೆಯುತ್ತಿರುವ ಸಂಘರ್ಷಗಳನ್ನು ಶಮನಗೊಳಿಸುವಲ್ಲಿ ಚೀನಾ ದೊಡ್ಡ ಪಾತ್ರ ವಹಿಸುತ್ತಿದೆ ಎಂದು ಬೆನ್ನು ತಟ್ಟಿಕೊಂಡಿದ್ದರು. ಅದರಲ್ಲೂ ವಿಶೇಷವಾಗಿ ಭಾರತ-ಪಾಕಿಸ್ತಾನ ನಡುವಿನ ಇತ್ತೀಚಿನ ಮಿಲಿಟರಿ ಉದ್ವಿಗ್ನತೆಯ ಸಮಯದಲ್ಲಿ ಚೀನಾ ಮಧ್ಯಸ್ಥಿಕೆ ವಹಿಸಿತ್ತು ಎಂಬ ಆಶ್ಚರ್ಯಕರ ಹೇಳಿಕೆ ನೀಡಿದ್ದರು.
ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಇಂತದ್ದೇ ಹೇಳಿಕೆ ನೀಡಿ ಭಾರತದ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಚೀನಾ ಕೂಡ ಅದೇ ತಪ್ಪನ್ನು ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ‘ಆಪರೇಷನ್ ಸಿಂಧೂರ್’ ನಡೆಸಿತ್ತು. ಭಾರತದ ಈ ಉಗ್ರ ರೂಪಕ್ಕೆ ಹೆದರಿದ ಪಾಕಿಸ್ತಾನವು ಹೋರಾಟ ನಿಲ್ಲಿಸುವಂತೆ ಕೋರಿತ್ತು. ಭಾರತ ಸರ್ಕಾರವು ಈ ವಿಷಯವನ್ನು ಸಂಸತ್ತಿನಲ್ಲಿಯೂ ಸ್ಪಷ್ಟಪಡಿಸಿದ್ದು, ಯಾವುದೇ ವಿದೇಶಿ ಮಧ್ಯಸ್ಥಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪುನರುಚ್ಚರಿಸಿದೆ.

