Wednesday, December 31, 2025

‘ಜನ ನಾಯಗನ್’ ಹೆಸರಲ್ಲಿ ಜನಸಾಮಾನ್ಯರ ಸುಲಿಗೆ: ಚಿತ್ರತಂಡದಿಂದ ಬೆಂಗಳೂರಿಗರಿಗೆ ಶಾಕ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ನಟ ದಳಪತಿ ವಿಜಯ್ ಅವರ ಕೊನೆಯ ಚಿತ್ರವೆನ್ನಲಾದ ‘ಜನ ನಾಯಗನ್’ ಬಿಡುಗಡೆಗೆ ಸಿದ್ಧವಾಗಿದೆ. ರಾಜಕೀಯ ಪ್ರವೇಶಿಸಿರುವ ವಿಜಯ್, ಈ ಸಿನಿಮಾವನ್ನು ತಮ್ಮ ರಾಜಕೀಯ ಭವಿಷ್ಯದ ಮೆಟ್ಟಿಲಾಗಿ ಬಳಸಿಕೊಳ್ಳುತ್ತಿದ್ದಾರೆಂಬ ಚರ್ಚೆ ಒಂದೆಡೆಯಾದರೆ, ಚಿತ್ರದ ಟಿಕೆಟ್ ದರ ನೋಡಿ ಬೆಂಗಳೂರಿನ ಅಭಿಮಾನಿಗಳು ದಂಗಾಗಿದ್ದಾರೆ. ‘ಜನ ನಾಯಕ’ ಎಂಬ ಹೆಸರಿಟ್ಟುಕೊಂಡು ಜನರ ಜೇಬಿಗೆ ಕತ್ತರಿ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಸಾಮಾನ್ಯವಾಗಿ ಮಧ್ಯಮ ವರ್ಗದ ಪ್ರೇಕ್ಷಕರು ನೆಚ್ಚಿಕೊಳ್ಳುವ ಬೆಂಗಳೂರಿನ ವೀರೇಶ್ ಮತ್ತು ನವರಂಗದಂತಹ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿಯೂ ಟಿಕೆಟ್ ದರ ಮುಗಿಲು ಮುಟ್ಟಿದೆ.

ಆರಂಭಿಕ ದರ: 800 ರೂಪಾಯಿ.

ಬಾಲ್ಕನಿ ದರ: 1,000 ರೂಪಾಯಿಗೂ ಅಧಿಕ.

ಜನವರಿ 9ರ ಬೆಳಿಗ್ಗೆ 6:30ರ ಶೋಗೆ ಈಗಾಗಲೇ ಅಡ್ವಾನ್ಸ್ ಬುಕಿಂಗ್ ಶುರುವಾಗಿದ್ದು, ಬೆಲೆ ಕೇಳಿ ಪ್ರೇಕ್ಷಕರು ಹೌಹಾರುತ್ತಿದ್ದಾರೆ. ಮಲ್ಟಿಪ್ಲೆಕ್ಸ್ ಬುಕಿಂಗ್ ಆರಂಭವಾದರೆ ಈ ದರ ಇನ್ನಷ್ಟು ಏರಿಕೆಯಾಗುವ ಭೀತಿ ಇದೆ.

ಚೆನ್ನೈನಲ್ಲಿ ಅತಿ ಹೆಚ್ಚು ಅಂದರೂ ವಿಶೇಷ ಶೋಗೆ 300 ರೂ. ಹಾಗೂ ಸಾಮಾನ್ಯ ಶೋಗೆ 100-150 ರೂ. ದರವಿರುತ್ತದೆ. ತೆಲುಗು ರಾಜ್ಯಗಳಲ್ಲಿಯೂ ಟಿಕೆಟ್ ದರ ನಿಯಂತ್ರಣದಲ್ಲಿದೆ.

ಬೆಂಗಳೂರಿನಲ್ಲಿ ಕನ್ನಡ ಡಬ್ಬಿಂಗ್ ಆವೃತ್ತಿ ಇಲ್ಲದಿದ್ದರೂ, ಕೇವಲ ತಮಿಳು ಸಿನಿಮಾಗೆ ನಾಲ್ಕು ಪಟ್ಟು ಹೆಚ್ಚು ದರ ವಸೂಲಿ ಮಾಡಲಾಗುತ್ತಿದೆ.

ತೆಲುಗಿನ ‘ಭಗವಂತ್ ಕೇಸರಿ’ ಚಿತ್ರದ ರೀಮೇಕ್ ಎನ್ನಲಾದ ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮಮಿತಾ ಬಿಜು ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದು, ಎಚ್. ವಿನೋದ್ ಆಕ್ಷನ್ ಕಟ್ ಹೇಳಿದ್ದಾರೆ. ರಾಜಕೀಯಕ್ಕೆ ಹೋಗುವ ಮುನ್ನ ವಿಜಯ್ ಮಾಡುತ್ತಿರುವ ಈ ವ್ಯಾಪಾರ ಈಗ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

error: Content is protected !!