ಹೊಸದಿಗಂತ ಡಿಜಿಟಲ್ ಡೆಸ್ಕ್:
2025ರಲ್ಲಿ ದೇಶದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣವಾಗಿ ಉತ್ತರ ಪ್ರದೇಶ ಗುರುತಿಸಿಕೊಂಡಿದೆ.
ಈ ವರ್ಷದಲ್ಲಿ ಅತೀ ಹೆಚ್ಚು ದೇಶೀಯ ಪ್ರವಾಸೋದ್ಯಮವನ್ನು ಉತ್ತರ ಪ್ರದೇಶ ದಾಖಲಿದೆ. ಜೊತೆಗೆ ವಿದೇಶಿ ಪ್ರವಾಸಿಗರ ಭೇಟಿಯಲ್ಲಿ ಇದು ನಾಲ್ಕನೇ ಸ್ಥಾನದಲ್ಲಿದೆ.
ಈ ವರ್ಷದಲ್ಲಿ 137 ಕೋಟಿಗೂ ಹೆಚ್ಚು ದೇಶೀಯ ಪ್ರವಾಸಿಗರು ಮತ್ತು 3.66 ಲಕ್ಷ ವಿದೇಶಿ ಪ್ರವಾಸಿಗರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದಾರೆ ಎಂದು ಭಾರತ ಸರ್ಕಾರದ ಪ್ರವಾಸೋದ್ಯಮ ಸಚಿವಾಲಯ ತಿಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಉತ್ತರ ಪ್ರದೇಶ ರಾಜ್ಯ ಸರ್ಕಾರ, ಉತ್ತರ ಪ್ರದೇಶವು ಪ್ರವಾಸೋದ್ಯಮದಲ್ಲಿ ದಾಖಲೆ ಬರೆಯಲು ಹಲವು ಕಾರಣಗಳಿವೆ. ಮುಖ್ಯವಾಗಿ ಈ ಬಾರಿ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭದಲ್ಲೇ 66 ಕೋಟಿಗೂ ಹೆಚ್ಚು ಪ್ರವಾಸಿಗರು ಪಾಲ್ಗೊಂಡಿದ್ದರು. ಇನ್ನು ಅಯೋಧ್ಯೆ, ವಾರಣಾಸಿ, ಮಥುರಾ ವೃಂದಾವನ ಮತ್ತು ಶ್ರಾವಸ್ತಿ ಪ್ರಮುಖ ಪ್ರವಾಸೋದ್ಯಮ ಕೇಂದ್ರಗಳಾಗಿ ಗುರುತಿಸಲ್ಪಟ್ಟಿದೆ. ಇನ್ನು ರಾಜ್ಯಾದ್ಯಂತ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯು ಆಯೋಜಿಸುವ ‘ದೀಪೋತ್ಸವ’, ‘ರಂಗೋತ್ಸವ’, ‘ದೇವ ದೀಪಾವಳಿ’ ಮತ್ತು ‘ಮಾಘ ಮೇಳ’ ಮುಂತಾದ ನಿಯಮಿತ ಕಾರ್ಯಕ್ರಮಗಳು ಇಲ್ಲಿಗೆ ಪ್ರವಾಸಿಗರನ್ನು ಆಕರ್ಷಿಸಿದೆ ಎಂದು ತಿಳಿಸಿದೆ.
ಉತ್ತರ ಪ್ರದೇಶದಲ್ಲಿ 2017 ರ ಮೊದಲು ನಿರ್ಲಕ್ಷಿಸಲ್ಪಟ್ಟ ಅನೇಕ ಪ್ರವಾಸೋದ್ಯಮ ತಾಣಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಪುನರುಜ್ಜೀವನಗೊಳಿಸಲಾಗಿದೆ. ಇದರೊಂದಿಗೆ ಸಾರಿಗೆ, ಆತಿಥ್ಯ ಮತ್ತು ಸಂಪರ್ಕವನ್ನು ಬಲಪಡಿಸಲು ಒತ್ತು ನೀಡಲಾಗಿದೆ. ಸುಧಾರಿತ ವಾಯು ಸಂಪರ್ಕ, ವಿಸ್ತೃತ ರೈಲು, ಬಸ್ ಸೇವೆಗಳು ಮತ್ತು ವಸತಿ ಸೌಲಭ್ಯಗಳು ಹೆಚ್ಚಿನ ಸಂಖ್ಯೆಯಲ್ಲಿ ವಿದೇಶಿ ಪ್ರವಾಸಿಗರನ್ನು ಆಕರ್ಷಿಸಿದೆ ಎನ್ನಲಾಗಿದೆ.
ಅಂಕಿಅಂಶಗಳ ಮಾಹಿತಿ ಪ್ರಕಾರ 2025ರಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ರಾಜ್ಯದಲ್ಲಿ 1,283.33 ಕೋಟಿ ರೂ. ಮೌಲ್ಯದ ಅಭಿವೃದ್ಧಿ ಯೋಜನೆಗಳನ್ನು ಪ್ರಾರಂಭಿಸಿದೆ. ಇದರಲ್ಲಿ ವಾರಣಾಸಿಯಲ್ಲಿ ಘಾಟ್‌ಗಳ ಅಭಿವೃದ್ಧಿ, ಮೊರಾದಾಬಾದ್‌ನ ಭಗವಾನ್‌ಪುರ ದೇವಸ್ಥಾನ, ಶಹಜಹಾನ್‌ಪುರದ ಅಜಿತಾಶ್ರಮ ಯೋಗ್ ಕುಂಜ್, ವಾಲ್ಮೀಕಿ ನಗರದ ಲವ್ ಕುಶ್ ಕುಟಿ, ತ್ರೇತಾಯುಗ್ ಭೂಮಿ ಕುಟಿ, ಭರತ್‌ಕೋಥಿ, ಸೀತಾ ರಸೋಯಿ ಮತ್ತು ಕೌಸಲ್ಯ ಸ್ಥಳಗಳ ಪುನಃಸ್ಥಾಪನೆ ಮೊದಲಾದವುಗಳು ಸೇರಿವೆ.
ಜಿಲ್ಲಾ ಪ್ರವಾಸೋದ್ಯಮ ಘಟಕಗಳ ಮೂಲಕ 7 ಕೋಟಿ ರೂ. ಮೌಲ್ಯದ ಐದು ಹೊಸ ಯೋಜನೆಗಳನ್ನು ಪ್ರಾರಂಭಿಸಲಾಗಿದ್ದು, ಮುಖ್ಯಮಂತ್ರಿ ಪ್ರವಾಸೋದ್ಯಮ ಅಭಿವೃದ್ಧಿ ಸಹಕಾರ ಯೋಜನೆಯಡಿ ಈ ವರ್ಷ ಎರಡು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇನ್ನೂ ನಾಲ್ಕು ಯೋಜನೆಗಳಿಗೆ ಶೀಘ್ರದಲ್ಲೇ ಅನುಮೋದನೆ ದೊರೆಯಲಿದೆ.

