ಹೊಸದಿಗಂತ ವರದಿ ಮಡಿಕೇರಿ:
ಮಾರಣಾಂತಿಕ ಹಲ್ಲೆಗೊಳಗಾಗಿ ಆಟೋ ಚಾಲಕ ಸಾವಿಗೀಡಾಗಿರುವ ಘಟನೆ ಗೋಣಿಕೊಪ್ಪದಲ್ಲಿ ಗುರುವಾರ ಬೆಳಗಿನ ಜಾವ ನಡೆದಿದೆ.
ಗೋಣಿಕೊಪ್ಪಲಿನ ಹರಿಶ್ಚಂದ್ರಪುರದ ನಿವಾಸಿ ನವಾಜ್ (39) ಸಾವಿಗೀಡಾದ ಆಟೋ ಚಾಲಕ.
ಖಾಸಗಿ ಸಂಸ್ಥೆಯೊಂದರಲ್ಲಿ ಚಾಲಕನಾಗಿ ನವಾಜ್ ಬಿಡುವಿನ ಸಮಯದಲ್ಲಿ ಆಟೋ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದರೆನ್ನಲಾಗಿದ್ದು, ರಾತ್ರಿ ಹಾತೂರು- ಕುಂದಾ ರಸ್ತೆ ಮಾರ್ಗಕ್ಕೆ ಆಟೋ ಕರೆಸಿಕೊಂಡು ಆತನ ಮೇಲೆ ದೊಣ್ಣೆಯಿಂದ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ ಎನ್ನಲಾಗಿದೆ.
ತೀವ್ರವಾಗಿ ಗಾಯಗೊಂಡಿದ್ದ ನವಾಜ್ ನನ್ನು ಗುರುವಾರ ಬೆಳಗಿನ ಜಾವ ಗೋಣಿಕೊಪ್ಪಲು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಬರಲಾಯಿತಾದರೂ, ಕೆಲವೇ ಕ್ಷಣಗಳಲ್ಲಿ ಆತ ಸಾವಿಗೀಡಾಗಿದ್ದಾಗಿ ತಿಳಿದು ಬಂದಿದೆ. ಗೋಣಿಕೊಪ್ಪಲು ಪೊಲೀಸ್ ವೃತ್ತ ನಿರೀಕ್ಷಕ ಶಿವರಾಜ್ ಮುಧೋಳ್, ಠಾಣಾಧಿಕಾರಿ ಪ್ರದೀಪ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.

