Thursday, January 1, 2026

ಮೃತ್ಯುಪಾಶವಾದ ವಿದ್ಯುತ್ ತಂತಿಗಳು: ಪೊಲೀಸರ ಸಮಯಪ್ರಜ್ಞೆಗೆ ನಾಲ್ವರು ಸುರಕ್ಷಿತ!

ಹೊಸದಿಗಂತ ಮಡಿಕೇರಿ:

ಬೆಳಗಿನ ಜಾವ ಆವರಿಸಿದ್ದ ದಟ್ಟ ಮಂಜು ಮತ್ತು ನಿಯಂತ್ರಣ ತಪ್ಪಿದ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸೃಷ್ಟಿಯಾಗಿದ್ದ ಮೃತ್ಯುಕೂಪದಿಂದ ನಾಲ್ವರು ಪಾರಾಗಿದ್ದಾರೆ. ಪೊಲೀಸರು ಮತ್ತು ಸಾರ್ವಜನಿಕರ ಸಮಯಪ್ರಜ್ಞೆಯಿಂದ ಗೋಣಿಕೊಪ್ಪಲು ರಸ್ತೆಯಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದೆ.

ಗುರುವಾರ ಬೆಳಗಿನ ಜಾವ ಗೋಣಿಕೊಪ್ಪಲಿನ ನಿವಾಸಿ ರೋಶನ್ ಹಾಗೂ ಅವರ ಮೂವರು ಸ್ನೇಹಿತರು ದೇವರಪುರದಿಂದ ಗೋಣಿಕೊಪ್ಪಲಿಗೆ ಕಾರಿನಲ್ಲಿ ಬರುತ್ತಿದ್ದರು. ಗೋಣಿಕೊಪ್ಪಲು-ಮೈಸೂರು ರಸ್ತೆಯ ಸೀಗೆತೋಡು ಎಂಬಲ್ಲಿ ದಟ್ಟವಾದ ಮಂಜು ಕವಿದಿದ್ದ ಕಾರಣ, ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಜೋರಾಗಿ ಡಿಕ್ಕಿ ಹೊಡೆದು ಪಲ್ಟಿಯಾಗಿದೆ.

ಡಿಕ್ಕಿಯ ರಭಸಕ್ಕೆ ವಿದ್ಯುತ್ ಕಂಬ ಧರಾಶಾಯಿಯಾಗಿದೆ, ವಿದ್ಯುತ್ ತಂತಿಗಳು ರಸ್ತೆಯ ಮೇಲೆ ಹರಿದು ಬಿದ್ದಿದ್ದವು. ತಕ್ಷಣವೇ ಕಾರ್ಯಪ್ರವೃತ್ತರಾದ ಸ್ಥಳೀಯರೊಬ್ಬರಾದ ರಶೀದ್, ಪೊಲೀಸ್ ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡಿದರು.

ಸ್ಥಳಕ್ಕೆ ಧಾವಿಸಿದ ಪೊಲೀಸರು ಮೊದಲು ಚೆಸ್ಕಾಂ ಕಚೇರಿಗೆ ಕರೆ ಮಾಡಿದರು. ಅಲ್ಲಿಂದ ಸ್ಪಂದನೆ ವಿಳಂಬವಾದಾಗ, ವಿಳಂಬ ಮಾಡದೆ ನೇರವಾಗಿ ಲೈನ್ ಮ್ಯಾನ್ ಮತ್ತು ಕಿರಿಯ ಅಭಿಯಂತರರಿಗೆ ಕರೆ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸುವಂತೆ ಸೂಚಿಸಿದರು.

ಬಳಿಕ ಎ.ಎಸ್.ಐ ಪ್ರಮೋದ್, ಚಾಲಕ ಚಿಣ್ಣಪ್ಪ ಅಕ್ಕಿ, ಕಾನ್ಸ್ಟೇಬಲ್ ರಮೇಶ್ ಮತ್ತು ಚೆಸ್ಕಾಂ ಸಿಬ್ಬಂದಿ ಕೃಷ್ಣ ಅವರು ರಸ್ತೆಯಲ್ಲಿದ್ದ ತಂತಿಗಳನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದರೂ, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ವರೂ ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಒಂದು ವೇಳೆ ವಿದ್ಯುತ್ ಸಂಪರ್ಕ ಕಡಿತಗೊಳಿಸಲು ವಿಳಂಬವಾಗಿದ್ದರೆ ಪರಿಸ್ಥಿತಿ ಭೀಕರವಾಗುತ್ತಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

error: Content is protected !!