Thursday, January 1, 2026

ಪಾನ್‌ ಮಸಾಲಾ, ಸಿಗರೇಟ್‌, ಬೀಡಿ ಸೇದೋರ ಬಾಯಿ ಸುಡುತ್ತೆ! ಫೆ.1 ರಿಂದ ಹೊಸ ತೆರಿಗೆ, ಸೆಸ್‌ ಜಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಾರ್ವಜನಿಕ ಆರೋಗ್ಯ ರಕ್ಷಣೆಯ ಉದ್ದೇಶದಿಂದ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಫೆಬ್ರವರಿ 1ರಿಂದ ತಂಬಾಕು ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಮತ್ತು ಪಾನ್ ಮಸಾಲಾ ಮೇಲೆ ಹೊಸ ಸೆಸ್ ವಿಧಿಸಲು ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಸರ್ಕಾರದ ಅಧಿಸೂಚನೆ ಪ್ರಕಾರ, ತಂಬಾಕು ಮತ್ತು ಪಾನ್ ಮಸಾಲಾ ಮೇಲಿನ ಹೊಸ ತೆರಿಗೆಗಳು ಜಿಎಸ್‌ಟಿ ದರಕ್ಕಿಂತ ಹೆಚ್ಚಿರಲಿದ್ದು, ಪ್ರಸ್ತುತ ಜಾರಿಯಲ್ಲಿರುವ ಪರಿಹಾರ ಸೆಸ್‌ಗೆ ಬದಲಾಗಿ ಅನ್ವಯವಾಗಲಿದೆ. ಫೆಬ್ರವರಿ 1ರಿಂದ ಪಾನ್ ಮಸಾಲಾ, ಸಿಗರೇಟ್, ತಂಬಾಕು ಮತ್ತು ಸಮಾನ ಉತ್ಪನ್ನಗಳಿಗೆ ಶೇ.40 ಜಿಎಸ್‌ಟಿ ವಿಧಿಸಲಾಗುತ್ತದೆ. ಬೀಡಿಗಳ ಮೇಲೆ ಶೇ.18 ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನ್ವಯವಾಗಲಿದೆ ಎಂದು ಸ್ಪಷ್ಟಪಡಿಸಲಾಗಿದೆ.

ಪಾನ್ ಮಸಾಲಾ ಉತ್ಪನ್ನಗಳ ಮೇಲೆ ಆರೋಗ್ಯ ಮತ್ತು ರಾಷ್ಟ್ರೀಯ ಭದ್ರತಾ ಸೆಸ್ ವಿಧಿಸಲಾಗುವುದಾದರೆ, ತಂಬಾಕು ಹಾಗೂ ಅದರ ಸಂಬಂಧಿತ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಜಾರಿಯಾಗಲಿದೆ. ಇದರಿಂದ ಈ ಉತ್ಪನ್ನಗಳ ಬೆಲೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಈ ಸಂಬಂಧವಾಗಿ ಹಣಕಾಸು ಸಚಿವಾಲಯವು ಬುಧವಾರ ‘ಚೂಯಿಂಗ್ ತಂಬಾಕು, ಜರ್ದಾ, ಸುಗಂಧಿತ ತಂಬಾಕು ಮತ್ತು ಗುಟ್ಕಾ ಪ್ಯಾಕಿಂಗ್ ಯಂತ್ರಗಳ (ಸಾಮರ್ಥ್ಯ ನಿರ್ಧಾರ ಮತ್ತು ಸುಂಕ ಸಂಗ್ರಹ) ನಿಯಮಗಳು–2026’ ಕುರಿತ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಮೂಲಕ ತಂಬಾಕು ಉತ್ಪಾದನೆ ಮತ್ತು ಮಾರಾಟದ ಮೇಲಿನ ನಿಯಂತ್ರಣವನ್ನು ಮತ್ತಷ್ಟು ಬಿಗಿಗೊಳಿಸುವ ಉದ್ದೇಶವಿದೆ.

error: Content is protected !!