ಹೊಸದಿಗಂತ ಬೆಳಗಾವಿ:
ಹೊಸ ವರ್ಷದ ಸಂಭ್ರಮಾಚರಣೆಯ ಮಂಪರಿನಲ್ಲಿದ್ದಾಗ ಇತ್ತ ನಗರದ ಪ್ರತಿಷ್ಠಿತ ಹಿಂಡಲಗಾ ಕೇಂದ್ರ ಕಾರಾಗೃಹದ ಆವರಣಕ್ಕೆ ಕಿಡಿಗೇಡಿಗಳು ಡ್ರಗ್ಸ್ ಹಾಗೂ ಮೊಬೈಲ್ ಫೋನ್‌ಗಳನ್ನು ಎಸೆದು ಪರಾರಿಯಾಗಿರುವ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ.
ಜನವರಿ 1ರ ಮುಂಜಾನೆ ಸುಮಾರು 3 ಗಂಟೆಯ ಸುಮಾರಿಗೆ, ಮುಖಕ್ಕೆ ಮಾಸ್ಕ್ ಧರಿಸಿದ್ದ ದುಷ್ಕರ್ಮಿಗಳು ಜೈಲಿನ ಆವರಣಕ್ಕೆ ತಲುಪಿದ್ದಾರೆ. ಯಾರೂ ಇಲ್ಲದ ಸಮಯ ಸಾಧಿಸಿ, ಜೈಲಿನ ಗೋಡೆಯ ಆಚೆಯಿಂದ ಡ್ರಗ್ಸ್ ಪ್ಯಾಕೆಟ್ ಹಾಗೂ ಮೊಬೈಲ್ ಫೋನ್‌ಗಳನ್ನು ಒಳಗಡೆ ಎಸೆದಿದ್ದಾರೆ. ಈ ಇಡೀ ದೃಶ್ಯವು ಜೈಲಿನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಜೈಲಿನ ಒಳಗೆ ಇರುವ ಕೈದಿಗಳಿಗೆ ಈ ಮಾದಕ ವಸ್ತುಗಳನ್ನು ತಲುಪಿಸುವ ಉದ್ದೇಶದಿಂದಲೇ ಈ ಕೃತ್ಯ ನಡೆದಿದೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ. ಘಟನೆ ನಡೆದ ಬೆನ್ನಲ್ಲೇ ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಈ ಘಟನೆಯು ಹಿಂಡಲಗಾ ಜೈಲಿನ ಭದ್ರತೆಯ ಬಗ್ಗೆ ಮತ್ತೊಮ್ಮೆ ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಜೈಲಿನೊಳಗೆ ನಿಷೇಧಿತ ವಸ್ತುಗಳ ಪೂರೈಕೆ ಜಾಲ ಸಕ್ರಿಯವಾಗಿರುವುದಕ್ಕೆ ಸಾಕ್ಷಿಯೊದಗಿಸಿದೆ.

