Thursday, January 1, 2026

ರಾಜಕೀಯದಲ್ಲಿ ಆಸೆ ಇರಬಾರದೇ?: ಮುಖ್ಯಮಂತ್ರಿ ಪಟ್ಟದ ಆಕಾಂಕ್ಷೆ ಬಿಚ್ಚಿಟ್ಟ ಪರಮೇಶ್ವರ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ‘ಮುಖ್ಯಮಂತ್ರಿ’ ಪಟ್ಟದ ಪೈಪೋಟಿಯ ನಡುವೆಯೇ, ಈಗ ಹಿರಿಯ ನಾಯಕ ಹಾಗೂ ಗೃಹ ಸಚಿವ ಡಾ. ಜಿ. ಪರಮೇಶ್ವರ್ ತಮ್ಮ ರಾಜಕೀಯ ಆಕಾಂಕ್ಷೆಯನ್ನು ಬಹಿರಂಗಪಡಿಸಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ರಾಜಕೀಯದಲ್ಲಿ ಪದೋನ್ನತಿ ಹೊಂದುವ ಆಸೆ ನನಗೂ ಇದೆ,” ಎನ್ನುವ ಮೂಲಕ ಸಿಎಂ ರೇಸ್‌ಗೆ ತಾವೂ ಸೈ ಎಂಬ ಸುಳಿವು ನೀಡಿದ್ದಾರೆ.

“ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಆಂಬಿಷನ್ ಇರಬೇಕು. ರಾಜಕೀಯಕ್ಕೆ ಬಂದ ಮೇಲೆ ಶಾಸಕನಾಗಿ, ಮಂತ್ರಿಯಾಗಿ, ಆನಂತರ ಇನ್ನೂ ಉನ್ನತ ಸ್ಥಾನಕ್ಕೇರಬೇಕು ಎಂಬ ಹಂಬಲ ಇರುವುದು ಸಹಜ. ನಾನು ಯಾವಾಗಲೂ ಆಶಾವಾದಿ,” ಎಂದು ಪರಮೇಶ್ವರ್ ತಮ್ಮ ಮನದ ಮಾತನ್ನು ಹಂಚಿಕೊಂಡಿದ್ದಾರೆ. ಆದರೆ, ಅಂತಿಮವಾಗಿ ತಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಸ್ಪಷ್ಟಪಡಿಸುವ ಮೂಲಕ ಪಕ್ಷದ ಶಿಸ್ತನ್ನು ಎತ್ತಿ ಹಿಡಿದಿದ್ದಾರೆ.

ಇದೇ ಮೊದಲ ಬಾರಿಗೆ ಇಲಾಖೆಯಲ್ಲಿ 30ಕ್ಕೂ ಹೆಚ್ಚು ಡಿಐಜಿ ಮತ್ತು ಐಜಿಪಿ ದರ್ಜೆಯ ಅಧಿಕಾರಿಗಳಿಗೆ ಏಕಕಾಲಕ್ಕೆ ಮುಂಬಡ್ತಿ ನೀಡಲಾಗಿದೆ. ಕೇಂದ್ರ ಸರ್ಕಾರದಿಂದ ಇಲಾಖೆಯ ಆಧುನೀಕರಣಕ್ಕಾಗಿ ಮೊದಲ ಬಾರಿಗೆ 350 ಕೋಟಿ ರೂಪಾಯಿ ಅನುದಾನ ಲಭಿಸಿದೆ. ಎಡಿಜಿಪಿ ಮುರುಗನ್ ಅವರ ನಿರಂತರ ಪ್ರಯತ್ನದಿಂದ ಈ ಅನುದಾನ ಸಾಧ್ಯವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗಾವಿ ಜೈಲಿನಲ್ಲಿ ಗಾಂಜಾ ಎಸೆಯುವಂತಹ ಅಕ್ರಮ ಚಟುವಟಿಕೆಗಳ ವರದಿಯಾಗಿದ್ದು, ಈ ಬಗ್ಗೆ ಡಿಜಿ ಅಲೋಕ್ ಕುಮಾರ್ ಅವರು ಖುದ್ದಾಗಿ ಸ್ಥಳ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದರು.

error: Content is protected !!