ಹೊಸದಿಗಂತ ವಿಜಯಪುರ:
ಜಿಲ್ಲೆಗೆ ಸಂಪೂರ್ಣ ಸರ್ಕಾರಿ ವೈದ್ಯಕೀಯ ಕಾಲೇಜು ಮಂಜೂರು ಮಾಡಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟ ಗುರುವಾರ 106ನೇ ದಿನಕ್ಕೆ ಕಾಲಿಟ್ಟಿದೆ. ಈ ಸಂದರ್ಭದಲ್ಲಿ ಹೊಸ ವರ್ಷದ ಸಂಭ್ರಮದ ನಡುವೆಯೇ ಪ್ರತಿಭಟನಾಕಾರರು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲರ ಸೊಲ್ಲಾಪುರ ರಸ್ತೆಯ ನಿವಾಸಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು ಹಾಗೂ ಹೋರಾಟಗಾರರ ನಡುವೆ ತೀವ್ರ ವಾಕ್ಸಮರ ನಡೆದು, ಪರಿಸ್ಥಿತಿ ಉದ್ವಿಗ್ನಗೊಂಡಿತ್ತು.
ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ವಿಳಂಬವಾಗುತ್ತಿರುವುದನ್ನು ಖಂಡಿಸಿ ಸಚಿವರ ನಿವಾಸದ ಮುಂದೆ ಪ್ರತಿಭಟನೆಗೆ ಮುಂದಾದ ಹೋರಾಟಗಾರರನ್ನು ಪೊಲೀಸರು ತಡೆದರು. ಇದರಿಂದ ಆಕ್ರೋಶಗೊಂಡ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. “ನಮಗೆ ಸರ್ಕಾರಿ ಮೆಡಿಕಲ್ ಕಾಲೇಜು ಬೇಕೇ ಬೇಕು” ಎಂದು ಹಠ ಹಿಡಿದ ಹೋರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದು, ವಾಹನಗಳ ಮೂಲಕ ಹೊರ್ತಿ ಹಾಗೂ ಝಳಕಿ ಪೊಲೀಸ್ ಠಾಣೆಗಳಿಗೆ ಸ್ಥಳಾಂತರಿಸಿದರು.
“ನಮ್ಮ ನ್ಯಾಯಸಮ್ಮತವಾದ ಬೇಡಿಕೆಯನ್ನು ಪೊಲೀಸರ ಮೂಲಕ ಹತ್ತಿಕ್ಕಲು ಸರ್ಕಾರ ಪ್ರಯತ್ನಿಸುತ್ತಿದೆ” ಎಂದು ಹೋರಾಟಗಾರರು ಕಿಡಿಕಾರಿದರು. ಜಿಲ್ಲಾಡಳಿತ ಮತ್ತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಲೇಜು ಮಂಜೂರಾಗುವವರೆಗೂ ಹೋರಾಟ ನಿಲ್ಲದು ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯಲ್ಲಿ ಸಂಗನ ಬಸವೇಶ್ವರ ಶ್ರೀಗಳು, ಅರವಿಂದ ಕುಲಕರ್ಣಿ, ಸುರೇಖಾ ರಜಪೂತ, ಅನಿಲ ಹೊಸಮನಿ, ಬಿ. ಭಗವಾನ ರೆಡ್ಡಿ ಸೇರಿದಂತೆ ಮಲ್ಲಿಕಾರ್ಜುನ ಬಟಗಿ, ಲಲಿತಾ ಬಿಜ್ಜರಗಿ ಮತ್ತು ಅನೇಕ ನಾಗರಿಕರು ಪಾಲ್ಗೊಂಡಿದ್ದರು.

