Thursday, January 1, 2026

ಫಾರ್ಮ್‌ನಲ್ಲಿದ್ದರೂ ಓವನ್‌ಗೆ ಇಲ್ಲ ಸ್ಥಾನ; 12 ಪಂದ್ಯಗಳಿಂದ ಹೊರಗಿದ್ದ ಕಾನೊಲಿಗೆ ಒಲಿದ ಅದೃಷ್ಟ!

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರಲ್ಲಿ ಭಾರತ ಮತ್ತು ಶ್ರೀಲಂಕಾ ಜಂಟಿಯಾಗಿ ಆಯೋಜಿಸಲಿರುವ ಟಿ20 ವಿಶ್ವಕಪ್‌ಗಾಗಿ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ 15 ಸದಸ್ಯರ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಅನುಭವಿ ಆಟಗಾರ ಮಿಚೆಲ್ ಮಾರ್ಷ್ ನೇತೃತ್ವದ ಈ ತಂಡದಲ್ಲಿ ಹಲವು ಅಚ್ಚರಿಯ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

2025ರಲ್ಲಿ ಟಿ20 ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದ ಮಿಚೆಲ್ ಓವನ್ ಅವರನ್ನು ಆಯ್ಕೆ ಮಂಡಳಿ ಕೈಬಿಟ್ಟಿರುವುದು ಎಲ್ಲರಿಗೂ ಆಶ್ಚರ್ಯ ತಂದಿದೆ. ಬಿಬಿಎಲ್‌ನಲ್ಲಿ ಸಿಡ್ನಿ ಥಂಡರ್ ವಿರುದ್ಧ ಕೇವಲ 42 ಎಸೆತಗಳಲ್ಲಿ 11 ಸಿಕ್ಸರ್‌ಗಳ ನೆರವಿನಿಂದ 108 ರನ್ ಸಿಡಿಸಿದ್ದರೂ, ಅವರಿಗೆ ವಿಶ್ವಕಪ್ ಟಿಕೆಟ್ ಸಿಕ್ಕಿಲ್ಲ.

ಕಳೆದ 12 ಅಂತರರಾಷ್ಟ್ರೀಯ ಟಿ20 ಪಂದ್ಯಗಳಿಂದ ತಂಡದಿಂದ ಹೊರಗುಳಿದಿದ್ದ ಕೂಪರ್ ಕಾನೊಲಿ ಅವರನ್ನು ನೇರವಾಗಿ ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ಮೂಲಕ ಮಂಡಳಿ ಅಚ್ಚರಿ ಮೂಡಿಸಿದೆ.

ಕೂಪರ್ ಕಾನೊಲಿ ಸೇರಿದಂತೆ ಮ್ಯಾಥ್ಯೂ ಶಾರ್ಟ್, ಮ್ಯಾಟ್ ಕುನ್ಹೆಮನ್ ಮತ್ತು ಕ್ಸೇವಿಯರ್ ಬಾರ್ಟ್ಲೆಟ್ ಅವರಿಗೆ ಇದು ಚೊಚ್ಚಲ ಟಿ20 ವಿಶ್ವಕಪ್ ಆಗಲಿದೆ.

ತಂಡವು ಪ್ಯಾಟ್ ಕಮ್ಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ಜೋಶ್ ಹ್ಯಾಜಲ್‌ವುಡ್‌ರಂತಹ ದಿಗ್ಗಜ ಆಟಗಾರರ ಅನುಭವವನ್ನು ನೆಚ್ಚಿಕೊಂಡಿದೆ. ಸ್ಪಿನ್ ವಿಭಾಗದ ಜವಾಬ್ದಾರಿಯನ್ನು ಎಂದಿನಂತೆ ಆಡಮ್ ಜಂಪಾ ಹೊತ್ತುಕೊಳ್ಳಲಿದ್ದಾರೆ.

2026ರ ಟಿ20 ವಿಶ್ವಕಪ್‌ಗೆ ಆಸ್ಟ್ರೇಲಿಯಾ ತಂಡ:
ಮಿಚೆಲ್ ಮಾರ್ಷ್ (ನಾಯಕ), ಟ್ರಾವಿಸ್ ಹೆಡ್, ಪ್ಯಾಟ್ ಕಮ್ಮಿನ್ಸ್, ಮಾರ್ಕಸ್ ಸ್ಟೊಯಿನಿಸ್, ಜೋಶ್ ಹೇಜಲ್‌ವುಡ್, ನಾಥನ್ ಎಲ್ಲಿಸ್, ಕ್ಸೇವಿಯರ್ ಬಾರ್ಟ್ಲೆಟ್, ಮ್ಯಾಥ್ಯೂ ವೇಡ್, ಕೂಪರ್ ಕಾನೊಲಿ, ಆಡಮ್ ಜಂಪಾ, ಮ್ಯಾಟ್ ಕುನ್ಹೆಮನ್, ಟಿಮ್ ಡೇವಿಡ್, ಕ್ಯಾಮರೂನ್ ಗ್ರೀನ್, ಜೋಶ್ ಇಂಗ್ಲಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್.

error: Content is protected !!