ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋಗಿಲು ಲೇಔಟ್‌ನ ಅಕ್ರಮ ನಿವಾಸಿಗಳಿಗೆ ಸರ್ಕಾರ ಮನೆ ಹಂಚಿಕೆ ಮಾಡುತ್ತಿರುವ ನಿರ್ಧಾರದ ವಿರುದ್ಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಜಮೀರ್ ಅಹ್ಮದ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ “ತುಷ್ಟೀಕರಣ ರಾಜಕಾರಣ”ದ ಗಂಭೀರ ಆರೋಪಗಳನ್ನು ಮಾಡಿದರು.
ಜಮೀರ್ ಅಹ್ಮದ್ ಅವರಿಗೆ ದೇಶ ಅಥವಾ ರಾಜ್ಯದ ಅಭಿವೃದ್ಧಿಗಿಂತ ತಮ್ಮ ಸಮುದಾಯದ ಜನಸಂಖ್ಯೆ ಮತ್ತು ಮತದಾರರ ಸಂಖ್ಯೆ ಹೆಚ್ಚಾಗುವುದೇ ಮುಖ್ಯವಾಗಿದೆ. ಇಡೀ ದೇಶವನ್ನು ಇಸ್ಲಾಂಮೀಕರಣ ಮಾಡುವ ಗುರಿ ಹೊಂದಿದ್ದಾರೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದರು.
ಸಿಎಂ ಸಿದ್ದರಾಮಯ್ಯ ಅವರು ಜಾತ್ಯಾತೀತತೆಯ ಹೆಸರಿನಲ್ಲಿ ಕೇವಲ ಮುಸ್ಲಿಂ ತುಷ್ಟೀಕರಣ ಮಾಡುತ್ತಿದ್ದಾರೆ. ಮೂಲ ನಿವಾಸಿಗಳು ಮತ್ತು ಅರ್ಹ ಕನ್ನಡಿಗರಿಗೆ ವಸತಿ ಕಲ್ಪಿಸುವ ಬದಲು, ಹೈಕಮಾಂಡ್ ಒತ್ತಡಕ್ಕೆ ಮಣಿದು ಹೊರಗಿನವರಿಗೆ ಮನೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.
ವಸತಿ ಪಡೆಯುತ್ತಿರುವವರು ಯಾವ ದೇಶದವರು ಎಂಬ ಬಗ್ಗೆ ಸರಿಯಾದ ತನಿಖೆ ನಡೆಯುತ್ತಿಲ್ಲ. ಇವರಲ್ಲಿ ಬಾಂಗ್ಲಾದೇಶದವರು ಅಥವಾ ರೋಹಿಂಗ್ಯಾಗಳು ಇರುವ ಸಾಧ್ಯತೆಯಿದೆ. ಮೊದಲು ಅವರ ಗುರುತು ಪತ್ತೆ ಹಚ್ಚಿ, ನಂತರವಷ್ಟೇ ಪುನರ್ವಸತಿ ಬಗ್ಗೆ ನಿರ್ಧರಿಸಬೇಕು ಎಂದು ಅವರು ಆಗ್ರಹಿಸಿದರು.
“ಕರ್ನಾಟಕದಲ್ಲಿ ತುಷ್ಟೀಕರಣ ಪರಾಕಾಷ್ಠೆ ಮುಟ್ಟಿದೆ. ಮೂಲ ಕನ್ನಡಿಗರನ್ನು ನಿರ್ಲಕ್ಷಿಸಿ ಕೇವಲ ಮತಬ್ಯಾಂಕ್‌ಗಾಗಿ ಸರ್ಕಾರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ,” ಎಂದು ಯತ್ನಾಳ್ ಕಿಡಿಕಾರಿದ್ದಾರೆ.

