January20, 2026
Tuesday, January 20, 2026
spot_img

ಬೇರೆಯವರ ಉಡುಗೊರೆ ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ, ಪ್ರಧಾನಿಗೆ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು: ಡಿಕೆಶಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ. ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು ಎಂದು ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಗೆ ಡಿಕೆ ಶಿವಕುಮಾರ್ ಬೆಳ್ಳಿ ಗಣೇಶ ಪ್ರತಿಮೆಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಪ್ರತಿಮೆಯನ್ನು ಬಿಜೆಪಿ ಶಾಸಕರೊಬ್ಬರು ತಂದಿದ್ದು, ಡಿಕೆ.ಶಿವಕುಮಾರ್ ಅವರು ಮೋದಿಯವರಿಗೆ ನೀಡಿದ್ದರು ಎಂಬ ವರದಿಯೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವರದಿ ಕುರಿತು ಹಲವು ಟೀಕೆಗಳೂ ವ್ಯಕ್ತವಾಗುತ್ತಿವೆ. ಇದರ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಅವರು ಸ್ಪಷ್ಟನೆ ನೀಡಿದ್ದಾರೆ.

ಬೇರೆಯವರ ಉಡುಗೊರೆಯನ್ನು ಮತ್ತೊಬ್ಬರಿಗೆ ನೀಡುವ ದುಸ್ಥಿತಿ ಬಂದಿಲ್ಲ. ಬೆಂಗಳೂರಿನ ಆರ್ ವಿ ರಸ್ತೆ ಮತ್ತು ಬೊಮ್ಮಸಂದ್ರ ನಡುವಣ ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಪೂರ್ವಕವಾಗಿ ನೀಡಿದ ಬೆಳ್ಳಿ ಗಣೇಶ ಪ್ರತಿಮೆ ಸ್ವಂತದ್ದು ಎಂದು ಹೇಳಿದ್ದಾರೆ.

ಅಂದಿನ ಸಮಾರಂಭದಲ್ಲಿ ನಾನು ಪ್ರಧಾನಿ ಅವರಿಗೆ ನೀಡಿದ ಪ್ರತಿಮೆ ಬಿಜೆಪಿ ಶಾಸಕ ಎಂ ಕೃಷ್ಣಪ್ಪ ಅವರು ತಂದದ್ದು ಎಂಬ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ವರದಿ ಸತ್ಯಕ್ಕೆ ದೂರವಾದದ್ದು ಹಾಗೂ ಸಂಪೂರ್ಣ ಸುಳ್ಳು. ಆ ಪ್ರತಿಮೆಯನ್ನು ನನ್ನ ಸ್ವಂತ ಹಣದಿಂದ ಖರೀದಿಸಿದ್ದಾಗಿದೆ. ಇದಕ್ಕೆ ಇಲಾಖೆಯ ಹಣವನ್ನೂ ಬಳಸಿಲ್ಲ. ಮನೆಯಿಂದ ತೆಗೆದುಕೊಂಡು ಹೋಗಿ, ಕಚೇರಿ ಸಿಬ್ಬಂದಿ ಮೂಲಕ ಎಸ್‌ಪಿಜಿ ತಪಾಸಣೆಗೆ ಒಳಪಡಿಸಿ ಪ್ರಧಾನಿಯವರಿಗೆ ನೀಡಲಾಯಿತು ಎಂದು ತಿಳಿಸಿದ್ದಾರೆ.

Must Read