Thursday, January 1, 2026

ಬ್ಯಾನರ್ ವಿಚಾರದಲ್ಲಿ ಕಲ್ಲುತೂರಾಟ: ಜನಾರ್ಧನ ರೆಡ್ಡಿ ಮನೆ ಮುಂದೆ ಬಿಗುವಿನ ವಾತಾವರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಕೊಪ್ಪಳ ಶಾಸಕ ಗಾಲಿ ಜನಾರ್ದನ ರೆಡ್ಡಿ ಮನೆ ಮುಂದೆ ಬ್ಯಾನರ್ ವಿಚಾರಕ್ಕೆ ಗಲಾಟೆ ನಡೆದು ಕಲ್ಲು ತೂರಾಟ ನಡೆದಿದೆ.

ಜನವರಿ 3 ರಂದು ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬಳ್ಳಾರಿಯ ಹವಂಬಾವಿ ನಗರದಲ್ಲಿರುವ ಜನಾರ್ದನ ರೆಡ್ಡಿ ಮನೆ ಮುಂಭಾಗ ಬ್ಯಾನರ್‌ ಅಳವಡಿಕೆ ಮಾಡಲು ಒಂದು ಗುಂಪು ಮುಂದಾಗಿತ್ತು.

ಈ ವೇಳೆ ಬ್ಯಾನರ್ ಹಾಕದಂತೆ ರೆಡ್ಡಿ ಅಪ್ತರು ಅಡ್ಡಿ ಪಡಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಪರಸ್ಪರ ಕಲ್ಲು ತೂರಿದ್ದಾರೆ. ಉದ್ವಿಗ್ನ ವಾತಾವರಣ ನಿರ್ಮಾಣವಾದ ಬೆನ್ನಲ್ಲೇ ಸ್ಥಳಕ್ಕೆ ಮಾಜಿ ಸಚಿವ ಶ್ರೀರಾಮುಲು ಆಗಮಿಸಿದ್ದಾರೆ. ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಕೂಡಾ ಘಟನಾ ಸ್ಥಳಕ್ಕೆ ಬಂದಿದ್ದಾರೆ.

ಎರಡೂ ಕಡೆ ನಾಯಕರು ಜಮಾವಣೆಯಾದ ಕೂಡಲೇ ತಳ್ಳಾಟ, ನೂಕಾಟ ನಡೆದಿದೆ. ಗಲಾಟೆ ವೇಳೆ ಶ್ರೀರಾಮುಲು ಅವರನ್ನು ಗುಂಪು ತಳ್ಳಿದೆ. ಗಲಾಟೆಯಾಗುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಪ್ರಹಾರ ಮಾಡಿ ಪರಿಸ್ಥಿತಿ ನಿಯಂತ್ರಣ ಮಾಡಿದ್ದಾರೆ. ಜನಾರ್ದನ ರೆಡ್ಡಿ ಮನೆ ಮುಂದೆ ಬಿಜೆಪಿ ಕಾರ್ಯಕರ್ತರು, ಮುಖಂಡರು, ಜಮಾಯಿಸುತ್ತಿದ್ದಾರೆ.

error: Content is protected !!