ಇಂದಿನ ವೇಗದ ಬದುಕಿನಲ್ಲಿ ಕೆಲಸದ ಒತ್ತಡ, ಕುಟುಂಬದ ಜವಾಬ್ದಾರಿಗಳು ಮತ್ತು ಭವಿಷ್ಯದ ಚಿಂತೆಗಳು ಮನಸ್ಸಿನ ಮೇಲೆ ಮೌನವಾಗಿ ಭಾರವಾಗುತ್ತಿವೆ. ಈ ಒತ್ತಡವನ್ನು ಸಮಯಕ್ಕೆ ಸರಿಯಾಗಿ ಗಮನಿಸದಿದ್ದರೆ ಅದು ಆತಂಕ, ನಿರಾಶೆ ಮತ್ತು ಕೊನೆಗೆ ಖಿನ್ನತೆಯ ರೂಪವನ್ನು ಪಡೆಯಬಹುದು. ವಿಶೇಷವಾಗಿ ಯುವಜನರಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಷಯ. ದೇಹ ಆರೋಗ್ಯವಾಗಿದ್ದರೆ ಸಾಕು ಎನ್ನುವ ಕಾಲ ಹೋಗಿದೆ; ಮನಸ್ಸು ಆರೋಗ್ಯವಾಗಿದ್ದರೆ ಮಾತ್ರ ಜೀವನ ಸಮತೋಲನದಲ್ಲಿರುತ್ತದೆ. ಆದ್ದರಿಂದ ಒತ್ತಡ ಮತ್ತು ಖಿನ್ನತೆಯನ್ನು ದೂರವಿಡಲು ಕೆಲವು ಸಣ್ಣ ಆದರೆ ಪರಿಣಾಮಕಾರಿ ಅಭ್ಯಾಸಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಅಗತ್ಯ.
ಡೈರಿ ಬರೆಯುವ ಅಭ್ಯಾಸ ಬೆಳೆಸಿಕೊಳ್ಳಿ:
ನಮ್ಮೊಳಗಿನ ಭಾವನೆಗಳನ್ನು ಎಲ್ಲರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಡೈರಿ ಉತ್ತಮ ಸ್ನೇಹಿತನಂತೆ ಕೆಲಸ ಮಾಡುತ್ತದೆ. ನಿಮ್ಮ ಮನಸ್ಸಿನ ತೊಳಲಾಟ, ಚಿಂತೆ, ಭಯಗಳನ್ನು ಬರೆಯುವುದರಿಂದ ಮನಸ್ಸು ಹಗುರವಾಗುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡುವ ಸರಳ ಚಿಕಿತ್ಸೆಯಾಗಿದೆ.
ಪ್ರಾಣಾಯಾಮ ಮತ್ತು ಉಸಿರಾಟದ ವ್ಯಾಯಾಮ:
ಪ್ರತಿದಿನ ಕೆಲವು ನಿಮಿಷ ಪ್ರಾಣಾಯಾಮ ಮಾಡುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ತೆರೆದ ಜಾಗದಲ್ಲಿ ಆಳವಾದ ಉಸಿರಾಟ ಮಾಡುವ ಅಭ್ಯಾಸ ಆತಂಕವನ್ನು ತಗ್ಗಿಸಿ ಮನಸ್ಸನ್ನು ಸಮತೋಲನದಲ್ಲಿಡುತ್ತದೆ.
ಸಾಕಷ್ಟು ನೀರು ಸೇವನೆ:
ನೀರಿನ ಕೊರತೆ ದೈಹಿಕ ಸಮಸ್ಯೆಗಳಷ್ಟೇ ಅಲ್ಲ, ಮಾನಸಿಕ ಅಸ್ವಸ್ಥತೆಯಿಗೂ ಕಾರಣವಾಗುತ್ತದೆ. ದಿನಕ್ಕೆ ಕನಿಷ್ಠ 2–3 ಲೀಟರ್ ನೀರು ಕುಡಿಯುವುದು ಅಗತ್ಯ. ಎಳನೀರು, ಮಜ್ಜಿಗೆ, ಸೂಪ್ ಮತ್ತು ಹಣ್ಣಿನ ರಸಗಳೂ ಸಹ ಮನಸ್ಸಿನ ಆರೋಗ್ಯಕ್ಕೆ ಸಹಕಾರಿಯಾಗುತ್ತವೆ.
ಸಣ್ಣ ಸಣ್ಣ ದಿನಚರಿ ಬದಲಾವಣೆಗಳಿಂದಲೇ ಮನಸ್ಸನ್ನು ಆರೋಗ್ಯವಾಗಿಟ್ಟುಕೊಳ್ಳಬಹುದು. ಮನಸ್ಸು ಚೆನ್ನಾಗಿದ್ದರೆ ಜೀವನವೂ ಸುಂದರವಾಗುತ್ತದೆ.

