ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಜಿಎಫ್ ಚಾಪ್ಟರ್ 2 ನಂತರ ಇಡೀ ಭಾರತೀಯ ಚಿತ್ರರಂಗ ಕಾತರದಿಂದ ಕಾಯುತ್ತಿರುವ ಸಿನಿಮಾ ಎಂದರೆ ಅದು ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’. ಗೀತು ಮೋಹನ್ ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರ ಮಾರ್ಚ್ 19ರಂದು ತೆರೆಗೆ ಬರಲು ಸಜ್ಜಾಗಿದೆ. ಆದರೆ ಸಿನಿಮಾ ಬಿಡುಗಡೆಗೆ ದಿನ ಹತ್ತಿರವಾಗುತ್ತಿದ್ದಂತೆ, ಚಿತ್ರದ ವಿರುದ್ಧ ಅಪಪ್ರಚಾರದ ಸದ್ದು ಜೋರಾಗಿದೆ.
ಸದ್ಯ ಸಿನಿಮಾ ತಂಡವು ಹಂತ ಹಂತವಾಗಿ ಪೋಸ್ಟರ್‌ಗಳನ್ನು ಬಿಡುಗಡೆ ಮಾಡುತ್ತಿದೆ. ರೆಟ್ರೋ ಶೈಲಿಯಲ್ಲಿರುವ ಈ ಪೋಸ್ಟರ್‌ಗಳು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿವೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಸುಖಾ ಸುಮ್ಮನೆ ಈ ಪೋಸ್ಟರ್‌ಗಳನ್ನು ಟೀಕಿಸುತ್ತಿದ್ದಾರೆ. ಇದರ ಹಿಂದೆ ಬಾಲಿವುಡ್ ಚಿತ್ರರಂಗದ ಕೈವಾಡವಿರಬಹುದು ಎಂಬ ಅನುಮಾನ ದಟ್ಟವಾಗಿ ಮೂಡಿದೆ.
ಮಾರ್ಚ್ 19ರಂದು ಬಾಲಿವುಡ್‌ನ ಬಹುನಿರೀಕ್ಷಿತ ‘ಧುರಂಧರ್ 2’ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಒಂದೇ ದಿನ ಎರಡು ದೊಡ್ಡ ಸಿನಿಮಾಗಳು ಅಖಾಡಕ್ಕಿಳಿಯುತ್ತಿರುವುದರಿಂದ ಈ ಕ್ಲ್ಯಾಶ್ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ‘ಟಾಕ್ಸಿಕ್’ ಬಗ್ಗೆ ನಕಾರಾತ್ಮಕ ಸುದ್ದಿ ಹಬ್ಬಿಸಿದರೆ ಅದು ‘ಧುರಂಧರ್ 2’ ಚಿತ್ರದ ಗಳಿಕೆಗೆ ಪೂರಕವಾಗಬಹುದು ಎಂಬ ‘ಚೀಪ್ ಗಿಮಿಕ್’ ತಂತ್ರ ಇದರ ಹಿಂದೆ ಅಡಗಿದೆ ಎಂದು ಸಿನಿರಸಿಕರು ಅಭಿಪ್ರಾಯಪಟ್ಟಿದ್ದಾರೆ.
ನೆಗೆಟಿವ್ ಪ್ರಚಾರದ ಮೂಲಕ ಯಶ್ ಸಿನಿಮಾವನ್ನು ಕಟ್ಟಿಹಾಕುತ್ತೇವೆ ಎಂದುಕೊಂಡವರಿಗೆ ಇತಿಹಾಸ ನೆನಪಿಸುವ ಅಗತ್ಯವಿದೆ. ಹಿಂದೆ ‘ಕೆಜಿಎಫ್’ ಎದುರು ಶಾರುಖ್ ಖಾನ್ ಅಂತಹ ಘಟಾನುಘಟಿ ನಟನ ಸಿನಿಮಾ ಬಂದರೂ ಯಶ್ ಗೆದ್ದಿದ್ದರು. ‘ಕೆಜಿಎಫ್ 2’ ಸಮಯದಲ್ಲಿ ದಳಪತಿ ವಿಜಯ್ ಅಭಿನಯದ ‘ಬೀಸ್ಟ್’ ಸಿನಿಮಾ ಕೂಡ ಯಶ್ ಹವಾ ಮುಂದೆ ಮಕಾಡೆ ಮಲಗಿತ್ತು.
ಯಶ್ ಅವರು ಒಂದು ಸಿನಿಮಾಗಾಗಿ ನಾಲ್ಕು ವರ್ಷ ಶ್ರಮ ಹಾಕಿದ್ದಾರೆ ಎಂದರೆ ಅದರಲ್ಲಿ ಅಪ್ರತಿಮ ಗಟ್ಟಿತನ ಇರುತ್ತದೆ ಎಂಬ ನಂಬಿಕೆ ಅಭಿಮಾನಿಗಳದ್ದು. ಸ್ವತಃ ಯಶ್ ಅವರೇ ಈ ಚಿತ್ರಕ್ಕೆ ಕಥೆ ಬರೆದಿರುವುದು ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಟೀಸರ್ ಮತ್ತು ಟ್ರೇಲರ್ ಬಂದ ಮೇಲೆ ಇಂತಹ ಟೀಕೆಗಳಿಗೆ ತಾನಾಗಿಯೇ ಉತ್ತರ ಸಿಗಲಿದೆ.

