ರಾತ್ರಿ ಪಾರ್ಟಿಗಳಲ್ಲಿ ಡ್ರಿಂಕ್ಸ್ ಮಾಡಿದ ಬಳಿಕ ಕೆಲವರು ಏಕಾಏಕಿ ಭಾವುಕರಾಗುವುದು, ಹಳೆಯ ಸಂಬಂಧಗಳನ್ನು ನೆನಪಿಸಿಕೊಂಡು ಕರೆ ಅಥವಾ ಮೆಸೇಜ್ ಮಾಡುವುದು, ನೆನಸಿಕೊಂಡು ಅಳೋದು ಇದೆಲ್ಲ ಬಹುಮಂದಿಗೆ ಪರಿಚಿತ ಅನುಭವ. ಸಾಮಾನ್ಯ ದಿನಗಳಲ್ಲಿ ಮನಸ್ಸಿನೊಳಗೆ ಅಡಗಿಸಿಕೊಂಡಿರುವ ಭಾವನೆಗಳು ಮದ್ಯ ಸೇವಿಸಿದ ಕ್ಷಣಗಳಲ್ಲಿ ಹೊರಬರುವುದು ಯಾಕೆ ಎಂಬ ಪ್ರಶ್ನೆ ಹಲವರನ್ನು ಕಾಡುತ್ತದೆ. ಇದಕ್ಕೆ ಉತ್ತರ ನಮ್ಮ ಮೆದುಳಿನ ಕಾರ್ಯವಿಧಾನದಲ್ಲೇ ಅಡಗಿದೆ.
ತಜ್ಞರ ಪ್ರಕಾರ, ಮದ್ಯ ಸೇವಿಸಿದಾಗ ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂಬ ಭಾಗದ ನಿಯಂತ್ರಣ ಶಕ್ತಿ ಕಡಿಮೆಯಾಗುತ್ತದೆ. ಈ ಭಾಗವೇ ನಮ್ಮ ನಡವಳಿಕೆ, ಮಾತು ಮತ್ತು ನಿರ್ಧಾರಗಳನ್ನು ನಿಯಂತ್ರಿಸುವ “ಬ್ರೇಕ್ ಸಿಸ್ಟಮ್”. ಮದ್ಯ ದೇಹಕ್ಕೆ ಸೇರಿದ ತಕ್ಷಣ ಈ ಬ್ರೇಕ್ ನಿಧಾನಗೊಳ್ಳುತ್ತದೆ. ಪರಿಣಾಮ, ಸಾಮಾನ್ಯವಾಗಿ ತಡೆಹಿಡಿದಿರುವ ಭಾವನೆಗಳು ಯಾವುದೇ ಅಡ್ಡಿಯಿಲ್ಲದೆ ಹೊರಹೊಮ್ಮುತ್ತವೆ.
ಇನ್ನೊಂದು ಪ್ರಮುಖ ಕಾರಣ ಡೋಪಮೈನ್ ಹಾರ್ಮೋನ್. ಮದ್ಯ ಸೇವನೆಯಿಂದ ಈ “ಸಂತೋಷದ ರಾಸಾಯನಿಕ” ಪ್ರಮಾಣ ಹೆಚ್ಚಾಗಿ, ಧೈರ್ಯ ಮತ್ತು ಆತ್ಮವಿಶ್ವಾಸ ತಾತ್ಕಾಲಿಕವಾಗಿ ಏರುತ್ತದೆ. ಈ ಹಂತದಲ್ಲಿ “ಏನು ಮಾಡಿದರೂ ಪರವಾಗಿಲ್ಲ” ಎನ್ನುವ ಭಾವನೆ ಮೂಡುತ್ತದೆ. ಜೊತೆಗೆ “ಆಲ್ಕೋಹಾಲ್ ಮಯೋಪಿಯಾ” ಎನ್ನುವ ಸ್ಥಿತಿಯಿಂದ ಭವಿಷ್ಯದ ಪರಿಣಾಮಗಳ ಬಗ್ಗೆ ಯೋಚಿಸುವ ಶಕ್ತಿ ಕಡಿಮೆಯಾಗುತ್ತದೆ. ನಾಳೆ ಪಶ್ಚಾತ್ತಾಪವಾಗಬಹುದು ಎಂಬ ಅರಿವು ಕ್ಷಣಿಕವಾಗಿ ಮಸುಕಾಗುತ್ತದೆ.
ಮದ್ಯ ಸಾಮಾಜಿಕ ಆತಂಕವನ್ನೂ ಕಡಿಮೆ ಮಾಡುತ್ತದೆ. ಹೀಗಾಗಿ ಮೌನವಾಗಿರುವವರು ಕೂಡ ತಮ್ಮೊಳಗಿನ ನೋವು, ಒಂಟಿತನ ಮತ್ತು ಹಳೆಯ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ತಜ್ಞರ ಮಾತಿನಂತೆ, ಮದ್ಯ ಹೊಸ ಭಾವನೆಗಳನ್ನು ಸೃಷ್ಟಿಸುವುದಿಲ್ಲ; ಅದು ಈಗಾಗಲೇ ಮನಸ್ಸಿನೊಳಗೆ ಇರುವ ಭಾವನೆಗಳನ್ನು ಮಾತ್ರ ಹೊರತರುತ್ತದೆ ಎನ್ನುತ್ತಾರೆ.
ಇಂತಹ ಸಂದರ್ಭಗಳನ್ನು ತಪ್ಪಿಸಲು ಕುಡಿಯುವ ಮೊದಲು ಫೋನ್ ದೂರ ಇಡುವುದು, ಇಂಟರ್ನೆಟ್ ಆಫ್ ಮಾಡುವುದು ಅಥವಾ ನಿರ್ದಿಷ್ಟ ಸಂಪರ್ಕಗಳನ್ನು ಬ್ಲಾಕ್ ಮಾಡುವುದು ಸಹಾಯಕ. ಕುಡಿದ ಮತ್ತಿನಲ್ಲಿ ಬಂದ ಕರೆ ಅಥವಾ ಮೆಸೇಜ್‌ಗಳು ಮೋಜಿನಂತೆ ಕಂಡರೂ, ಅವು ಮೆದುಳಿನಲ್ಲಿ ಉಂಟಾಗುವ ತಾತ್ಕಾಲಿಕ ಬದಲಾವಣೆಯ ಪರಿಣಾಮ ಎಂಬುದನ್ನು ನೆನಪಿಟ್ಟುಕೊಳ್ಳುವುದು ಉತ್ತಮ.

