ಹೊಸದಿಗಂತ ಡಿಜಿಟಲ್ ಡೆಸ್ಕ್:
2027ರ ಏಕದಿನ ವಿಶ್ವಕಪ್‌ನ್ನು ದೃಷ್ಟಿಯಲ್ಲಿ ಇಟ್ಟುಕೊಂಡು, ಟೀಮ್ ಇಂಡಿಯಾ ಹೊಸ ವರ್ಷದ ಆರಂಭದಲ್ಲೇ ತಯಾರಿ ಆರಂಭಿಸಲು ಸಜ್ಜಾಗಿದೆ. ತವರಿನಲ್ಲಿ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನೇ ಈ ದೀರ್ಘಕಾಲಿಕ ಯೋಜನೆಯ ಮೊದಲ ಹೆಜ್ಜೆಯಾಗಿ ಬಿಸಿಸಿಐ ಪರಿಗಣಿಸಿದೆ.
ಟೀಮ್ ಮ್ಯಾನೇಜ್ಮೆಂಟ್ ಹಾಗೂ ಆಯ್ಕೆ ಸಮಿತಿಗಳು ಈಗಾಗಲೇ ಕೋರ್ ತಂಡದ ರೂಪುರೇಷೆ ತಯಾರಿಸುವ ಕೆಲಸದಲ್ಲಿದ್ದು, ಅನುಭವ ಮತ್ತು ಯುವಶಕ್ತಿಯ ಸಮತೋಲನಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಸೇರಿದಂತೆ ಹಿರಿಯ ಆಟಗಾರರ ಜೊತೆಗೆ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಚಿಂತನೆ ನಡೆಯುತ್ತಿದೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚುತ್ತಿರುವ ಕೆಲ ಯುವ ಆಟಗಾರರು ಕಿವೀಸ್ ಸರಣಿಗೆ ಬಲವಾದ ಸ್ಪರ್ಧಿಗಳಾಗಿ ಹೊರಹೊಮ್ಮಿದ್ದಾರೆ. ಕರ್ನಾಟಕದ ದೇವದತ್ ಪಡಿಕ್ಕಲ್ ನಾಲ್ಕು ಪಂದ್ಯಗಳಲ್ಲಿ ಮೂರು ಶತಕ ಬಾರಿಸಿ ಗಮನ ಸೆಳೆದಿದ್ದಾರೆ. ಋತುರಾಜ್ ಗಾಯಕ್ವಾಡ್ ಕೂಡ ಸತತ ಶತಕಗಳ ಮೂಲಕ ತಮ್ಮ ಫಾರ್ಮ್ ಸಾಬೀತುಪಡಿಸಿದ್ದಾರೆ. ಉತ್ತರ ಪ್ರದೇಶದ ವಿಕೆಟ್‌ಕೀಪರ್ ಬ್ಯಾಟರ್ ಧೃವ್ ಜುರೆಲ್ ಬ್ಯಾಟಿಂಗ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿ ಬ್ಯಾಕಪ್ ಕೀಪರ್ ಸ್ಥಾನಕ್ಕೆ ದಾವೆ ಹಾಕಿದ್ದಾರೆ.
ಮುಂಬೈನ ಸರ್ಫರಾಜ್ ಖಾನ್ ಸ್ಫೋಟಕ ಶತಕದ ಮೂಲಕ ಸುದ್ದಿಯಾಗಿದ್ದು, ಬರೋಡಾದ ಆಲ್‌ರೌಂಡರ್ ಕೃನಾಲ್ ಪಾಂಡ್ಯ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಭಾವ ಮೂಡಿಸಿದ್ದಾರೆ. ಕಿವೀಸ್ ಸರಣಿಗೆ ಕೆಲವೇ ಸ್ಥಾನಗಳು ಖಾಲಿ ಇದ್ದರೂ, ಯುವ ಆಟಗಾರರ ಪ್ರದರ್ಶನದಿಂದ ಆಯ್ಕೆ ಸಮಿತಿಗೆ ಕಠಿಣ ತೀರ್ಮಾನ ಎದುರಾಗಿದೆ. ಯಾರಿಗೆ ಅವಕಾಶ, ಯಾರು ಹೊರಗುಳಿಯುತ್ತಾರೆ ಎಂಬುದು ಶೀಘ್ರದಲ್ಲೇ ಸ್ಪಷ್ಟವಾಗಲಿದೆ.

