Friday, January 2, 2026

ಬ್ಯಾನರ್ ಗಲಾಟೆ ವೇಳೆ ಘರ್ಷಣೆ, ಗುಂಡೇಟಿಗೆ ವ್ಯಕ್ತಿ ಬಲಿ: ನಾಲ್ಕು ಪ್ರಕರಣ ದಾಖಲು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಳ್ಳಾರಿಯಲ್ಲಿ ಶಾಸಕ ಜನಾರ್ದನ ರೆಡ್ಡಿ ನಿವಾಸದ ಬಳಿ ನಡೆದ ಬ್ಯಾನರ್ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ರೆಡ್ಡಿ ಎಂಬುವವರು ಗುಂಡೇಟಿಗೆ ಬಲಿಯಾಗಿದ್ದಾರೆ. ಈ ಸಂಬಂಧ ನಾಲ್ಕು ಪ್ರಕರಣ ದಾಖಲಾಗಿದೆ ಎಂದು ರಾಜ್ಯದ ಸಹಾಯಕ ಪೊಲೀಸ್ ಮಹಾ ನಿರ್ದೇಶಕ ಹೀತೇಂದ್ರ ತಿಳಿಸಿದರು.

ಎಸ್ಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಳ್ಳಾರಿಯಲ್ಲಿ ಬ್ಯಾನರ್ ವಿಚಾರಕ್ಕೆ ನಿನ್ನೆ ಸಂಜೆ 6.30 ಕ್ಕೆ ಕಲ್ಲು ತೂರಾಟವಾಗಿದೆ. ನಂತರ ಮುಗಿಯಿತು ಅನ್ನೋಷ್ಟರಲ್ಲಿ ಮತ್ತೊಮ್ಮೆ ಒಂಬತ್ತು ಗಂಟೆಗೆ ಗಲಾಟೆ ನಡೆದಿದೆ. ಒಂದು ಗುಂಪಿನಿಂದ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಬಳಿಕ ಪೊಲೀಸರು ಆಶ್ರುವಾಯು ಸಿಡಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ ಎಂದರು.

ಘಟನೆ ಸಂಬಂಧ ಈಗಾಗಲೇ ಐದು ಗನ್ ಸೀಜ್ ಮಾಡಿದ್ದೇವೆ. ಇನ್ನಷ್ಟು ಜನರ ಗನ್ ವಶಕ್ಕೆ ಪಡೆದುಕೊಳ್ಳುತ್ತೇವೆ. ಯಾವ ಗನ್ ನಿಂದ ಬುಲೆಟ್ ಹಾರಿದೆ. ಅದು ಯಾರದ್ದು? ಯಾರು ನಿಯಮ ಉಲ್ಲಂಘಿಸಿದ್ದಾರೆ ಎಂಬುದನ್ನು FSL ಪರೀಕ್ಷೆಯಿಂದ ತಿಳಿದುಕೊಳ್ಳಲಾಗುವುದು ಎಂದರು.

ಮೃತ ವ್ಯಕ್ತಿಯ ಮರಣೋತ್ತರ ಪರೀಕ್ಷೆ ಮುಗಿದಿದ್ದು, ಈಗಾಗಲೇ ಪ್ರಕರಣ ಸಂಬಂಧಿಸಿದಂತೆ ನಾಲ್ಕು ದೂರು ದಾಖಲಾಗಿದೆ. ರಾಜಶೇಖರ ಸಹೋದರ ಹತ್ಯೆ ಬಗ್ಗೆ ದೂರು ನೀಡಿದ್ದಾರೆ. ವಾಲ್ಮೀಕಿ ಅವಮಾನ ಮಾಡಿದ್ದಾರೆ ಎಂದು ಮತ್ತೊಂದು ಪ್ರಕರಣ ದಾಖಲಾಗಿದ್ದು, ಸೋಮೊಟೋ‌ ಕೇಸ್ ನ್ನು ಸಹ ಪೊಲೀಸರು ದಾಖಲಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

error: Content is protected !!