Friday, January 2, 2026

ಮಧ್ಯಪ್ರದೇಶದಲ್ಲಿ ಕಲುಷಿತ ಆಹಾರ ಸೇವಿಸಿ 200ಕ್ಕೂ ಹೆಚ್ಚು ಗಿಳಿಗಳ ಸಾವು

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರದೇಶದ ಖಾರಗೋನ್‌ ಜಿಲ್ಲೆಯ ನರ್ಮದಾ ನದಿಯ ದಡದಲ್ಲಿ ಕಲುಷಿತ ಆಹಾರ ಸೇವಿಸಿ ಬರೋಬ್ಬರಿ 200ಗಿಳಿಗಳು ಮೃತಪಟ್ಟಿರುವ ಘಟನೆ ಬೆಳಕಿಗೆ ಬಂದಿದೆ.

ಬಢ್ವಾಹ್‌ ಪ್ರದೇಶದ ನದಿ ದಂಡೆಯಲ್ಲಿರುವ ಜಲಚರ ಸೇತುವೆ ಬಳಿ ಕಳೆದ ನಾಲ್ಕು ದಿನಗಳಿಂದ ಮೃತ ಸ್ಥಿತಿಯಲ್ಲಿ ಗಿಳಿಗಳು ಪತ್ತೆಯಾಗುತ್ತಿವೆ. ಈ ಘಟನೆಯಿಂದ ಸ್ಥಳೀಯರಲ್ಲಿ ಬರ್ಡ್ ಫ್ಲೂ ಭೀತಿ ಉಂಟಾಗಿತ್ತು. ಆದರೆ, ಮರಣೋತ್ತರ ಪರೀಕ್ಷಾ ವರದಿಯಿಂದ ಬೆಳಕಿಗೆ ಬಂದಿರುವುದು ಏನೆಂದರೆ, ಇದು ಬರ್ಡ್‌ ಫ್ಲ್ಯೂನಿಂದಾದ ಅವಘಡವಲ್ಲ. ಬದಲಿಗೆ ಕಲುಷಿತ ಆಹಾರ ಸೇವನೆಯೇ ಕಾರಣ ಎನ್ನುವುದನ್ನು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಸಾಬೀತು ಪಡಿಸಿದ್ದಾರೆ.

ʻರಕ್ಷಣಾ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ಗಿಳಿಗಳು ಜೀವಂತವಾಗಿದ್ದವು. ಆದರೆ ಆಹಾರದಲ್ಲಿದ್ದ ವಿಷದ ತೀವ್ರತೆ ಎಷ್ಟಿತ್ತೆಂದರೆ, ಅವುಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲʼ ಎಂದು ಜಿಲ್ಲಾ ವನ್ಯಜೀವಿ ವಿಭಾಗದ ಟೋನಿ ಶರ್ಮಾ ಬೇಸರ ವ್ಯಕ್ತಪಡಿಸಿದರು.

ಅಸಮರ್ಪಕ ಆಹಾರ ಕ್ರಮ ಮತ್ತು ಕಲುಷಿತ ಆಹಾರ ಗಿಳಿಗಳ ಸಾವಿಗೆ ಕಾರಣವಾಗಿದೆ. ಪಶುವೈದ್ಯೆ ಡಾ. ಮನೀಶಾ ಚೌಹಾಣ್ ಅವರು ಮರಣೋತ್ತರ ಪರೀಕ್ಷೆ ನಡೆಸಿದ್ದು, ಗಿಳಿಗಳ ಜೀರ್ಣಾಂಗ ವ್ಯವಸ್ಥೆಯಲ್ಲಿ ಕಲುಷಿತ ಆಹಾರ ಪತ್ತೆಯಾಗಿದೆ. ಜನರು ಅರಿವಿಲ್ಲದೆ ಹಕ್ಕಿಗಳಿಗೆ ನೀಡುವ ಕೆಲವು ಆಹಾರಗಳು ಅವುಗಳ ಜೀರ್ಣಾಂಗ ವ್ಯವಸ್ಥೆಗೆ ಮಾರಕವಾಗುತ್ತವೆ ಎಂದು ಪಶುವೈದ್ಯಕೀಯ ಇಲಾಖೆಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.

ಸತ್ತ ಗಿಳಿಗಳ ಹೊಟ್ಟೆಯಲ್ಲಿ ಅಕ್ಕಿ ಮತ್ತು ಸಣ್ಣ ಕಲ್ಲುಗಳು ಪತ್ತೆಯಾಗಿದೆ. ಹೊಲಗಳಲ್ಲಿ ರೈತರು ಕೀಟನಾಶಕ ಸಿಂಪಡಿಸಿ ಬೆಳೆದ ಆಹಾರವನ್ನು ಸೇವಿಸಿರುವುದರಿಂದ ಹೀಗಾಗಿರಬಹುದು ಅಥವಾ ಪ್ರವಾಸಿಗರು ನೀಡಿದ ಬೇಯಿಸಿದ ಅಥವಾ ಉಳಿದ ಆಹಾರಗಳನ್ನು ಸೇವಿಸಿರುವುದು ಗಿಳಿಗಳ ಸಾವಿಗೆ ಕಾರಣವಾಗಿದೆ ಎಂದು ಪಶುವೈದ್ಯಕೀಯ ವಿಸ್ತರಣಾ ಅಧಿಕಾರಿ ಡಾ. ಸುರೇಶ್ ಬಘೇಲ್ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

error: Content is protected !!