Friday, January 2, 2026

ಸ್ವಿಸ್ ಬಾರ್‌ ಅಗ್ನಿ ಅವಘಡದಲ್ಲಿ 47 ಜನರು ಸಾವು: ಬೆಂಕಿ ಹೊತ್ತಿಕೊಳ್ಳಲು ಇದೇ ಕಾರಣನಾ?

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸ್ವಿಟ್ಜರ್ ಲೆಂಡ್ ನ ಕ್ರಾನ್ಸ್ ಮೊಂಟೆನಾದ ಐಶಾರಾಮಿ ಹೋಟೆಲ್ ವೊಂದರ ಬಾರ್ ನಲ್ಲಿ ಹೊಸ ವರ್ಷ ಸಂಭ್ರಮಾಚರಣೆ ವೇಳೆ ಸಂಭವಿಸಿದ ಭಾರಿ ಬೆಂಕಿ ಅನಾಹುತದಲ್ಲಿ 47 ಜನರು ಸಾವನ್ನಪ್ಪಿರುವುದಾಗಿ ಇಟಾಲಿಯನ್ ವಿದೇಶಾಂಗ ಸಚಿವ ಆಂಟೋನಿಯೊ ತಜಾನಿ ಹೇಳಿದ್ದಾರೆ.

ಘಟನೆಗೆ ಕಾರಣ ಕುರಿತು ಸ್ವಿಸ್ ತನಿಖಾಧಿಕಾರಿಗಳು ತನಿಖೆ ನಡೆಸುತ್ತಿರುವಾಗ ದೊರೆತ ವೀಡಿಯೊ ಮತ್ತು ಫೋಟೋವೊಂದು ವೈರಲ್ ಆಗಿದ್ದು, ಬೆಂಕಿ ಸ್ಫೋಟಗೊಂಡ ಕ್ಷಣವನ್ನು ತೋರಿಸುತ್ತದೆ. ತನಿಖಾಧಿಕಾರಿಗಳು ಫ್ಲ್ಯಾಶ್‌ಓವರ್ ಎನ್ನುವ ಘಟನೆ ಈ ದುರಂತಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಿದ್ದಾರೆ.

ಹೊಸ ವರ್ಷದ ಆಚರಣೆಯ ಸಂದರ್ಭದಲ್ಲಿ ವಲಾಯಿಸ್ ಕ್ಯಾಂಟನ್‌ನ ಕ್ರಾನ್ಸ್-ಮೊಂಟಾನಾದ ಆಲ್ಪೈನ್ ರೆಸಾರ್ಟ್‌ನಲ್ಲಿರುವ ಲೆ ಕಾನ್ಸ್ಟೆಲೇಷನ್ ಬಾರ್‌ನಲ್ಲಿ ಅಗ್ನಿಯು ವೇಗವಾಗಿ ಹರಡಿದ್ದು, ವ್ಯಾಪಕ ನಾಶವನ್ನುಂಟುಮಾಡಿದೆ. ಸೀಮಿತ ಜಾಗದಲ್ಲಿ ಎಲ್ಲಾ ದಹನಕಾರಿ ವಸ್ತುಗಳ ಹಠಾತ್ ದಹನವು ಸ್ಫೋಟ ಮತ್ತು ಅಗ್ನಿ ದುರಂತಕ್ಕೆ ಕಾರಣವೇ ಎಂದು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ.

ಷಾಂಪೇನ್ ಬಾಟಲಿ ಹಿಡಿದ ಜನರು ಸಂಭ್ರಮಿಸುತ್ತಿದ್ದಾಗ ಸೌಂಡ್ ಪ್ರೂಫಿಂಗ್ ಚಾವಣಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ತದನಂತರದ ಭೀತಿಯ ಕ್ಷಣಗಳನ್ನು ವಿಡಿಯೋ ತೋರಿಸುತ್ತದೆ. ಕೆಲವರು ವೇಗವಾಗಿ ಹರಡುವ ಬೆಂಕಿಯ ಜ್ವಾಲೆಯನ್ನು ನಂದಿಸಲು ಪ್ರಯತ್ನಿಸಿದ್ದರೆ, ಮತ್ತೆ ಕೆಲವರು ಅಲ್ಲಿಂದ ಓಡಿಹೋಗಲು ಇರುವ ಮಾರ್ಗಗಳನ್ನು ಹುಡುಕುವ ದೃಶ್ಯಗಳು ಕಾಣುತ್ತವೆ.

ಗುರುವಾರ ಮುಂಜಾನೆ 1:30 ರ ಸುಮಾರಿಗೆ ಬಾರ್‌ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಯುವಕನೊಬ್ಬ ಮೇಣದ ಬತ್ತಿ ಹಿಡಿದಿದ್ದ ಯುವತಿಯನ್ನು ತನ್ನ ಭುಜದ ಮೇಲೆ ಎತ್ತಿದಾಗ ತಕ್ಷಣ ಬೆಂಕಿ ಹೊತ್ತುಕೊಂಡು ಮರದ ಸೀಲಿಂಗ್ ಕೆಳಗೆ ಬಿದ್ದಿತು ಎಂದು ಪಾರ್ಟಿಯಲ್ಲಿದ್ದ ಇಬ್ಬರು ಮಹಿಳೆಯರು ಫ್ರೆಂಚ್ ನ ಸುದ್ದಿವಾಹಿನಿ BFMTV ಗೆ ತಿಳಿಸಿದ್ದಾರೆ.

ಅಮೆರಿಕ ಮೂಲದ ರಾಷ್ಟ್ರೀಯ ಅಗ್ನಿಶಾಮಕ ರಕ್ಷಣಾ ಸಂಘ (NFPA) ಪ್ರಕಾರ, ಅನಿಲವು ಕೋಣೆಯ ಛಾವಣಿಗೆ ಏರಿ ಗೋಡೆಗಳಾದ್ಯಂತ ಹರಡಿ, ತಾಪಮಾನವನ್ನು ಹೆಚ್ಚಿಸಿದಾಗ ಫ್ಲ್ಯಾಷ್‌ಓವರ್ ಸಂಭವಿಸುತ್ತದೆ. ಶಾಖವು ನಿರ್ಣಾಯಕ ಹಂತವನ್ನು ತಲುಪಿದ ನಂತರ, ಅಲ್ಲಿದ್ದ ಎಲ್ಲಾ ದಹನಕಾರಿ ವಸ್ತುಗಳು ಬಹುತೇಕ ಏಕಕಾಲದಲ್ಲಿ ಉರಿಯುತ್ತವೆ.

ಈ ಘಟನೆಯನ್ನು ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿಲ್ಲ ಎಂದು ಸ್ವಿಸ್ ಅಧಿಕಾರಿಗಳು ತಿಳಿಸಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿದ್ದು, ಗಾಯಾಳುಗಳನ್ನು ಸ್ಥಳಾಂತರಿಸಲು ಹಲವಾರು ಆಂಬ್ಯುಲೆನ್ಸ್‌ಗಳು ಮತ್ತು ರಕ್ಷಣಾ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿತ್ತು.

ವಿಧಿವಿಜ್ಞಾನ ತಂಡಗಳು ಘಟನಾ ಸ್ಥಳವನ್ನು ಪರಿಶೀಲಿಸುವುದನ್ನು ಮತ್ತು ಸಾಕ್ಷ್ಯಗಳನ್ನು ಮರುಪಡೆಯುವುದನ್ನು ಮುಂದುವರಿಸುವುದರಿಂದ ಅಧಿಕಾರಿಗಳು ಹೆಚ್ಚಿನ ನವೀಕರಣಗಳನ್ನು ಒದಗಿಸುವ ನಿರೀಕ್ಷೆಯಿದೆ.

error: Content is protected !!