ಹೊಸದಿಗಂತ ಡಿಜಿಟಲ್ ಡೆಸ್ಕ್:
ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಯಾರಿ ನಡೆಸುತ್ತಿರುವ ಟೀಂ ಇಂಡಿಯಾ, ಬಳಿಕ ಟಿ20 ವಿಶ್ವಕಪ್ ಗುರಿ ಇಟ್ಟುಕೊಂಡು ಮುಂದಿನ ಸಿದ್ಧತೆಯನ್ನು ಆರಂಭಿಸಲಿದೆ. ಈ ವರ್ಷದ ಅಂತಾರಾಷ್ಟ್ರೀಯ ಪಂದ್ಯಗಳ ಭಾಗವಾಗಿ ಭಾರತ ತಂಡ ಆಗಸ್ಟ್‌ನಲ್ಲಿ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ.
ಈ ಪ್ರವಾಸದಲ್ಲಿ ಟೆಸ್ಟ್ ಸರಣಿಯ ಜೊತೆಗೆ ಹೆಚ್ಚುವರಿ ಟಿ20 ಪಂದ್ಯಗಳನ್ನು ಆಡಲು ಬಿಸಿಸಿಐ ನಿರ್ಧರಿಸಿದೆ. ಈ ಟಿ20 ಸರಣಿಯಿಂದ ಸಂಗ್ರಹವಾಗುವ ಸಂಪೂರ್ಣ ಹಣವನ್ನು ಶ್ರೀಲಂಕಾದಲ್ಲಿ ಚಂಡಮಾರುತದಿಂದ ಹಾನಿಗೊಳಗಾದ ಕುಟುಂಬಗಳ ಪರಿಹಾರ ಹಾಗೂ ಪುನರ್‌ನಿರ್ಮಾಣ ಕಾರ್ಯಗಳಿಗೆ ಬಳಸಲಾಗುತ್ತದೆ ಎಂದು ತಿಳಿದು ಬಂದಿದೆ.
ಈ ಕುರಿತು ಶ್ರೀಲಂಕಾ ಕ್ರಿಕೆಟ್ ಮಂಡಳಿ ಅಧ್ಯಕ್ಷ ಶಮ್ಮಿ ಸಿಲ್ವಾ ಮಾಹಿತಿ ನೀಡಿದ್ದು, ಬಿಸಿಸಿಐ ತೆಗೆದುಕೊಂಡ ನಿರ್ಧಾರಕ್ಕೆ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ. ಡಿಸೆಂಬರ್ ಅಂತ್ಯದಲ್ಲೇ ಈ ನೆರವು ಪಂದ್ಯಗಳನ್ನು ಆಯೋಜಿಸುವ ಯೋಚನೆ ಇದ್ದರೂ, ಸಮಯದ ಕೊರತೆ ಮತ್ತು ಪ್ರಸಾರಕರ ಲಭ್ಯತೆ ಇಲ್ಲದ ಕಾರಣ ಸಾಧ್ಯವಾಗಿರಲಿಲ್ಲ. ಹೀಗಾಗಿ ಆಗಸ್ಟ್‌ನಲ್ಲಿ ಈ ಹೆಚ್ಚುವರಿ ಪಂದ್ಯಗಳನ್ನು ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಇದರ ನಡುವೆಯೇ ಭಾರತ–ಬಾಂಗ್ಲಾದೇಶ ನಡುವಿನ ಸರಣಿಯ ವೇಳಾಪಟ್ಟಿಯನ್ನೂ ಪ್ರಕಟಿಸಲಾಗಿದೆ. ಎರಡೂ ತಂಡಗಳ ನಡುವೆ ಏಕದಿನ ಪಂದ್ಯಗಳು ಸೆಪ್ಟೆಂಬರ್ 1, 3 ಮತ್ತು 6ರಂದು ನಡೆಯಲಿದ್ದು, ಟಿ20 ಪಂದ್ಯಗಳು ಸೆಪ್ಟೆಂಬರ್ 9, 12 ಮತ್ತು 13ರಂದು ನಡೆಯಲಿವೆ.

