ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಕಾಶದಲ್ಲಿ ಸಾಮಾನ್ಯವಾಗಿ ಕಾಣುವ ಯಾವುದೇ ವಸ್ತು ಬಿಟ್ಟು ಇನ್ನೇನೇ ಕಂಡರೂ ಎಲ್ಲರೂ ಆಶ್ಚರ್ಯ ಪಡೋದು ಖಂಡಿತ. ಕೆಲವರಿಗೆ ಆಶ್ಚರ್ಯ, ಕೆಲವರಿಗೆ ಭಯವೂ ಆಗುವುದುಂಟು. ಇಂಥದ್ದೇ ಒಂದು ಘಟನೆ ಅಥಣಿಯಲ್ಲಿ ನಡೆದಿದೆ.
ಅಥಣಿ ತಾಲೂಕಿನ ತೇಲಸಂಗ ಗ್ರಾಮದಲ್ಲಿ ನಿನ್ನೆ ಸಂಜೆ ಆಕಾಶದಲ್ಲಿ ಗೋಲಾಕಾರದ ನಿಗೂಢ ಆಕೃತಿ ಪತ್ತೆಯಾಗಿದ್ದು, ಜನರಲ್ಲಿ ಕುತೂಹಲಕ್ಕೆ ಕಾರಣವಾಗಿತ್ತು.
ಆಕಾಶದಲ್ಲಿ ವಿಭಿನ್ನ ಆಕಾರದ ವಸ್ತುವೊಂದು ಹಾರಾಡುತ್ತಿರುವುದು ಸ್ಥಳೀಯರ ಕಣ್ಣಿಗೆ ಬಿದ್ದಿದೆ. ವಿಷಯ ತಿಳಿಯುತ್ತಿದ್ದಂತೆ ನೂರಾರು ಜನರು ರಸ್ತೆಗೆ ಬಂದು ಆಕಾಶ ನೋಡಲು ಪ್ರಾರಂಭಿಸಿದ್ದಾರೆ. ಇದನ್ನು ಕಂಡ ಜನರು ಅಚ್ಚರಿಗೊಂಡಿದ್ದು, ತಮ್ಮ ಗ್ರಾಮಕ್ಕೆ ಏಲಿಯನ್ಸ್ ಬಂದಿರಬಹುದು ಎಂದು ಜನರು ಮಾತನಾಡಿಕೊಳ್ಳಲು ಪ್ರಾಂಭಿಸಿದ್ದರು. ಈ ನಿಗೂಢ ಆಕೃತಿ ಸುಮಾರು ಒಂದು ಗಂಟೆಗಳ ಕಾಲ ಆಕಾಶದಲ್ಲಿ ಕಾಣಿಸಿಕೊಂಡಿದೆ.
ಈ ದೃಶ್ಯವನ್ನು ಸ್ಥಳೀಯರು ತಮ್ಮ ಮೊಬೈಲ್ ಕ್ಯಾಮರಾಗಳಲ್ಲಿ ಸೆರೆಹಿಡಿದಿದ್ದಾರೆ. ಇದು ಹವಾಮಾನ ಇಲಾಖೆಯ ಬಲೂನ್ ಆಗಿರಬಹುದೇ? ಡ್ರೋನ್ ಆಗಿರಬಹುದೇ? ಅಥವಾ ಬೇರೇನಾದರೂ ನಿಗೂಢ ವಸ್ತುವೇ ಎಂದು ಗ್ರಾಮಸ್ಥರು ಚರ್ಚಿಸಲಾರಂಭಿಸಿದ್ದರು.

