ಹೊಸದಿಗಂತ ಡಿಜಿಟಲ್ ಡೆಸ್ಕ್:
ಹಾವೇರಿ ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಇಂದು ಆಯೋಜಿಸಲಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರ ಕಾರ್ಯಕ್ರಮದಲ್ಲಿ ಪ್ರಕೃತಿ ವಿಕೋಪ ಸಂಭವಿಸಿದ್ದು, ಸುಂಟರಗಾಳಿಯ ಆರ್ಭಟಕ್ಕೆ ಬೃಹತ್ ಪೆಂಡಾಲ್ ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ರಾಣೇಬೆನ್ನೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಅಂಬೇಡ್ಕರ್ ಪ್ರತಿಮೆ ಉದ್ಘಾಟನೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಕಾರ್ಯಕ್ರಮವನ್ನು ಮುಗಿಸಿ, ಸಚಿವ ಸತೀಶ್ ಜಾರಕಿಹೊಳಿ ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ಏಕಾಏಕಿ ಧೂಳು ಮಿಶ್ರಿತ ಸುಂಟರಗಾಳಿ ಬೀಸಲು ಆರಂಭಿಸಿದೆ. ಗಾಳಿಯ ವೇಗಕ್ಕೆ ಕಾರ್ಯಕ್ರಮಕ್ಕಾಗಿ ಹಾಕಲಾಗಿದ್ದ ಬೃಹತ್ ಪೆಂಡಾಲ್ ಕ್ಷಣಾರ್ಧದಲ್ಲಿ ನೆಲಸಮವಾಗಿದೆ.
ಕಾರ್ಯಕ್ರಮ ನಡೆಯುವ ವೇಳೆ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಕಾರ್ಯಕರ್ತರು ಪೆಂಡಾಲ್ ಕೆಳಗೆ ಕುಳಿತಿದ್ದರು. ಸಮಾರಂಭ ಮುಗಿದ ತಕ್ಷಣವೇ ಜನರೆಲ್ಲರೂ ಹೊರಬಂದಿದ್ದರಿಂದ ದೊಡ್ಡ ಮಟ್ಟದ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಒಂದು ವೇಳೆ ಕಾರ್ಯಕ್ರಮ ನಡೆಯುತ್ತಿರುವಾಗಲೇ ಈ ಘಟನೆ ಸಂಭವಿಸಿದ್ದರೆ ನೂರಾರು ಜನರಿಗೆ ಗಾಯಗಳಾಗುವ ಸಾಧ್ಯತೆಯಿತ್ತು.

