ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳು ಚಿತ್ರರಂಗದ ದಳಪತಿ ವಿಜಯ್ ತಮ್ಮ ಸಿನಿ ಪಯಣದ ಅಂತಿಮ ಅಧ್ಯಾಯಕ್ಕೆ ಸಜ್ಜಾಗಿದ್ದಾರೆ. ಅವರು ಪೂರ್ಣಪ್ರಮಾಣದ ರಾಜಕೀಯಕ್ಕೆ ಕಾಲಿಡುವ ಮುನ್ನ ನಟಿಸುತ್ತಿರುವ ಕೊನೆಯ ಸಿನಿಮಾ ‘ಜನ ನಾಯಗನ್’ ಮೇಲೆ ಅಭಿಮಾನಿಗಳಲ್ಲಿ ಬೆಟ್ಟದಷ್ಟು ನಿರೀಕ್ಷೆಯಿದೆ. ಇಂದು ಬಿಡುಗಡೆಯಾದ ಚಿತ್ರದ ಭರ್ಜರಿ ಟ್ರೈಲರ್ ಈ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಸಿನಿಮಾ ಘೋಷಣೆಯಾದ ದಿನದಿಂದಲೂ ಇದು ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಭಗವಂತ ಕೇಸರಿ’ ಚಿತ್ರದ ರಿಮೇಕ್ ಎಂಬ ಗುಸುಗುಸು ಕೇಳಿಬರುತ್ತಿತ್ತು. ನಿರ್ದೇಶಕ ಎಚ್. ವಿನೋದ್ ಈ ಬಗ್ಗೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಮಾತನಾಡಿದ್ದರು. ಆದರೆ, ಇಂದು ಹೊರಬಂದ ಟ್ರೈಲರ್ ನೋಡಿದವರಿಗೆ ಇದು ನಂದಮೂರಿ ಬಾಲಕೃಷ್ಣ ನಟನೆಯ ಚಿತ್ರದ ಅಧಿಕೃತ ರಿಮೇಕ್ ಎಂಬುದು ಖಾತ್ರಿಯಾಗಿದೆ.
‘ಜನ ನಾಯಗನ್’ ಕೇವಲ ರಿಮೇಕ್ ಆಗಿ ಉಳಿಯದೆ, ವಿಜಯ್ ಅವರ ರಾಜಕೀಯ ಪ್ರವೇಶಕ್ಕೆ ಭದ್ರ ಬುನಾದಿ ಹಾಕುವಂತಿದೆ. ಟ್ರೈಲರ್‌ನಲ್ಲಿ ವಿಜಯ್ ಹೇಳುವ ಸಂಭಾಷಣೆಗಳು ನೇರವಾಗಿ ಭ್ರಷ್ಟ ರಾಜಕಾರಣಿಗಳಿಗೆ ಟಾಂಗ್ ನೀಡುವಂತಿವೆ. ರಾಜಕಾರಣಿಗಳನ್ನು ಕಟ್ಟಿಹಾಕಿ ಹೊಡೆಯುವ ದೃಶ್ಯಗಳು ಹಾಗೂ ‘ಜನಸೇವೆ ಎಂದರೆ ಹೀಗಿರಬೇಕು’ ಎಂದು ವಿಜಯ್ ನೀಡುವ ಭಾಷಣಗಳು ಅವರ ನೈಜ ಜೀವನದ ರಾಜಕೀಯ ಆಶಯಗಳಿಗೆ ಕನ್ನಡಿ ಹಿಡಿದಿವೆ.
ಭರಪೂರ ಆಕ್ಷನ್, ಸ್ಲೋ ಮೋಷನ್ ನಡಿಗೆ, ಪಂಚ್ ಡೈಲಾಗ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಲು ಸಜ್ಜಾಗಿರುವ ‘ಜನ ನಾಯಗನ್’ ಇದೇ ಜನವರಿ 09 ರಂದು ತಮಿಳು ಹಾಗೂ ತೆಲುಗಿನಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ.

