Sunday, January 11, 2026

ಪ್ರೀತಿಗಾಗಿ ‘ವಶೀಕರಣ’ ನಂಬಿ ಕೈ ಸುಟ್ಟುಕೊಂಡ ಯುವತಿ: 2 ಲಕ್ಷ ರೂಪಾಯಿ ಪಂಗನಾಮ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿಸಿದ ಹುಡುಗನನ್ನು ಮರಳಿ ಪಡೆಯಲು ‘ವಶೀಕರಣ’ದ ಮೊರೆ ಹೋದ ಯುವತಿಯೊಬ್ಬಳು ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಹಣ ಕಳೆದುಕೊಂಡು ಕಂಗಾಲಾದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಸಾಮಾಜಿಕ ಜಾಲತಾಣದ ಜಾಹೀರಾತು ನಂಬಿ ಮೋಸಹೋದ ಯುವತಿ ಇದೀಗ ಆಡುಗೋಡಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾಳೆ.

ಸೋಷಿಯಲ್ ಮೀಡಿಯಾದಲ್ಲಿ ‘ಕಷ್ಟಕ್ಕೆ ಪರಿಹಾರ ನೀಡುತ್ತೇವೆ’ ಎಂದು ಕೃಷ್ಣಮೂರ್ತಿ ಗುರೂಜಿ ಎಂಬ ಹೆಸರಿನ ಅಕೌಂಟ್‌ನಿಂದ ಜಾಹೀರಾತು ನೀಡಲಾಗಿತ್ತು. ಇದನ್ನು ನಂಬಿದ ಯುವತಿಯು ಜಾಹೀರಾತಿನಲ್ಲಿದ್ದ ನಂಬರ್‌ಗೆ ಕರೆ ಮಾಡಿದ್ದಳು. ಈ ವೇಳೆ ತನ್ನನ್ನು ಚಂದ್ರಶೇಖರ್ ಸುಗತ್ ಗುರೂಜಿ ಎಂದು ಪರಿಚಯಿಸಿಕೊಂಡ ವ್ಯಕ್ತಿ, ಯುವತಿಯ ಪ್ರೇಮ ವೈಫಲ್ಯದ ಕಥೆಯನ್ನು ಕೇಳಿ ಸಾಂತ್ವನ ಹೇಳಿದ್ದಲ್ಲದೆ, “ಪ್ರೀತಿಸಿದ ಹುಡುಗನೇ ನಿನಗೆ ಸಿಗುತ್ತಾನೆ, ಆತನನ್ನು ವಶೀಕರಣ ಮಾಡಿಕೊಡುತ್ತೇನೆ” ಎಂದು ನಂಬಿಸಿದ್ದಾನೆ.

ಮದುವೆ ಮಾಡಿಸಿಕೊಡುವುದಾಗಿ ಭರವಸೆ ನೀಡಿದ ಈ ಭಂಡ ಗುರೂಜಿ, ಪೂಜೆ ಮತ್ತು ವಿಧಿವಿಧಾನಗಳ ಹೆಸರಿನಲ್ಲಿ ಹಂತಹಂತವಾಗಿ ಯುವತಿಯಿಂದ ಆನ್‌ಲೈನ್ ಮೂಲಕ 2.05 ಲಕ್ಷ ರೂಪಾಯಿ ಹಣವನ್ನು ವರ್ಗಾಯಿಸಿಕೊಂಡಿದ್ದಾನೆ. ಅಷ್ಟಕ್ಕೆ ಸುಮ್ಮನಾಗದ ಆಸಾಮಿ, ಮತ್ತೆ 4 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿದ್ದಾನೆ.

ಹಣ ನೀಡುತ್ತಾ ಹೋದರೂ ಯಾವುದೇ ಫಲಿತಾಂಶ ಸಿಗದಿದ್ದಾಗ ಮತ್ತು ಮತ್ತೆ ಹಣ ಕೇಳಿದಾಗ ಅನುಮಾನಗೊಂಡ ಯುವತಿ, ತಾನು ನೀಡಿದ್ದ ಹಣವನ್ನು ವಾಪಸ್ ಕೇಳಿದ್ದಾಳೆ. ಈ ವೇಳೆ ಗುರೂಜಿ ಅಸಲಿ ರೂಪ ತೋರಿಸಿದ್ದು, “ಹಣ ವಾಪಸ್ ಕೊಡಲ್ಲ, ಏನು ಮಾಡ್ತಿಯೋ ಮಾಡಿಕೋ” ಎಂದು ಯುವತಿಗೆ ಅವಾಜ್ ಹಾಕಿದ್ದಾನೆ.

ತಾನು ಮೋಸ ಹೋಗಿರುವುದು ತಡವಾಗಿ ಅರಿವಿಗೆ ಬಂದ ಕೂಡಲೇ ಯುವತಿಯು ಆಡುಗೋಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ನಕಲಿ ಗುರೂಜಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

error: Content is protected !!