Sunday, January 11, 2026

ಸಿನಿಮೀಯ ಶೈಲಿಯ ಶೂಟೌಟ್: ಥಾರ್‌ನಲ್ಲಿ ಬಂದು ಗುಂಡು ಹಾರಿಸಿ ಪರಾರಿಯಾದ ದುಷ್ಕರ್ಮಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರ ಪ್ರದೇಶದ ಗಾಜಿಯಾಬಾದ್‌ನ ನಂದಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಗ್ಗೆ ಹಾಡಹಗಲೇ ಭೀಕರ ಗುಂಡಿನ ದಾಳಿ ನಡೆದಿದೆ. ಕಪ್ಪು ಬಣ್ಣದ ಥಾರ್ ಕಾರಿನಲ್ಲಿ ಬಂದ ದುಷ್ಕರ್ಮಿಗಳು ರಸ್ತೆಯಲ್ಲಿ ನಿಂತಿದ್ದ ಬಲೆನೊ ಕಾರನ್ನು ಗುರಿಯಾಗಿಸಿಕೊಂಡು ಮೂರು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

ಸಿಕ್ರೋಡ್ ನಿವಾಸಿ ಸುನಿಲ್ ಕುಮಾರ್ ಎಂಬುವವರು ತಮ್ಮ ಮನೆಯಲ್ಲೇ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಶನಿವಾರ ಬೆಳಗ್ಗೆ ಸುಮಾರು 10 ಗಂಟೆಯ ಸಮಯದಲ್ಲಿ ಸುನಿಲ್ ಅವರ ಪುತ್ರ ಶುಭಮ್ ಮನೆಯ ಮುಂದೆ ನಿಂತಿದ್ದರು. ಇನ್ನೊಬ್ಬ ಪುತ್ರ ಹರ್ಷ್ ತನ್ನ ಸ್ನೇಹಿತ ಅಂಕುರ್ ಜೊತೆ ಬಲೆನೊ ಕಾರಿನಲ್ಲಿ ಕುಳಿತಿದ್ದರು.

ಈ ವೇಳೆ ಮೀರತ್ ರಸ್ತೆಯ ಕಡೆಯಿಂದ ವೇಗವಾಗಿ ಬಂದ ಕಪ್ಪು ಬಣ್ಣದ ಥಾರ್ ಕಾರು, ಬಲೆನೊ ಸಮೀಪಿಸುತ್ತಿದ್ದಂತೆ ಅದರಲ್ಲಿದ್ದ ಕಿಡಿಗೇಡಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಬಲೆನೊ ಕಾರಿಗೆ ಒಟ್ಟು ಮೂರು ಗುಂಡುಗಳು ತಗುಲಿದ್ದು, ಅದೃಷ್ಟವಶಾತ್ ಹರ್ಷ್ ಹಾಗೂ ಅಂಕುರ್ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದ್ದು, ಮಾಹಿತಿ ತಿಳಿಯುತ್ತಿದ್ದಂತೆಯೇ ನಂದಗ್ರಾಮ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ದುಷ್ಕರ್ಮಿಗಳ ಪತ್ತೆಗಾಗಿ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಜಾಲಾಡುತ್ತಿದ್ದಾರೆ.

error: Content is protected !!