Thursday, January 8, 2026

ಬೆಳ್ಳಂಬೆಳಗ್ಗೆ ಕಂಪಿಸಿದ ಭೂಮಿ: ಅಸ್ಸಾಂನಲ್ಲಿ 5.1ರಷ್ಟು ತೀವ್ರತೆಯ ಭೂಕಂಪ ದಾಖಲು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ಸೇರಿದಂತೆ ಈಶಾನ್ಯ ಭಾರತದ ಹಲವು ರಾಜ್ಯಗಳಲ್ಲಿ ಸೋಮವಾರ ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 5.1 ತೀವ್ರತೆ ದಾಖಲಾಗಿದ್ದು, ಅಸ್ಸಾಂನ ಮೋರಿಗಾಂವ್ ಜಿಲ್ಲೆಯಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ಸೋಮವಾರ ಬೆಳಗಿನ ಜಾವ 4:17ಕ್ಕೆ ಭೂಮಿ ಕಂಪಿಸಿದ್ದು, ಗಾಢ ನಿದ್ದೆಯಲ್ಲಿದ್ದ ಜನರು ಭಯಭೀತರಾಗಿ ಮನೆಗಳಿಂದ ಹೊರಬಂದಿದ್ದಾರೆ. ಭೂಮಿಯ ಮೇಲ್ಮೈಯಿಂದ ಸುಮಾರು 50 ಕಿಲೋಮೀಟರ್ ಆಳದಲ್ಲಿ ಈ ಕಂಪನ ಉಂಟಾಗಿದೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ.

ಮಧ್ಯ ಅಸ್ಸಾಂನ ಮೋರಿಗಾಂವ್, ಕಮ್ರೂಪ್ ಮೆಟ್ರೋಪಾಲಿಟನ್, ನಾಗಾಂವ್, ಗೋಲಾಘಾಟ್, ಜೋರ್ಹತ್ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ. ಅಷ್ಟೇ ಅಲ್ಲದೆ, ಉತ್ತರದ ಜಿಲ್ಲೆಗಳಾದ ಸೋನಿತ್‌ಪುರ, ಲಖಿಂಪುರ ಮತ್ತು ಬರ್ಪೇಟಾದಲ್ಲೂ ತೀವ್ರ ನಡುಕ ಉಂಟಾಗಿದೆ.

ಭೂಕಂಪದ ತೀವ್ರತೆ ಎಷ್ಟಿತ್ತೆಂದರೆ ಅಸ್ಸಾಂ ಮಾತ್ರವಲ್ಲದೆ ಅರುಣಾಚಲ ಪ್ರದೇಶ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರ ಮತ್ತು ಪಶ್ಚಿಮ ಬಂಗಾಳದ ಹಲವೆಡೆ ಭೂಮಿ ಕಂಪಿಸಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಭೂತಾನ್, ಚೀನಾ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲೂ ಈ ನಡುಕ ವರದಿಯಾಗಿದೆ.

error: Content is protected !!