ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಮೇರಿಲ್ಯಾಂಡ್ ರಾಜ್ಯದಲ್ಲಿ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಭಾರತ ಮೂಲದ ಯುವತಿಯ ಪ್ರಕರಣ ಗಂಭೀರ ತಿರುವು ಪಡೆದಿದೆ. ಎಲ್ಲಿಕಾಟ್ ನಗರದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ 27 ವರ್ಷದ ಡೇಟಾ ವಿಶ್ಲೇಷಕಿ ನಿಕಿತಾ ಗೋಡಿಶಾಲ ಅವರ ಮೃತದೇಹ ಪತ್ತೆಯಾಗಿದ್ದು, ಪ್ರಕರಣವನ್ನು ಕೊಲೆ ಎಂದು ಶಂಕಿಸಿ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.
ಹೊವಾರ್ಡ್ ಕೌಂಟಿ ಪೊಲೀಸರು ನೀಡಿದ ಮಾಹಿತಿಯಂತೆ, ನಿಕಿತಾ ಗೋಡಿಶಾಲ ಅವರ ಶವ ಆಕೆಯ ಮಾಜಿ ಗೆಳೆಯ ಅರ್ಜುನ್ ಶರ್ಮಾಗೆ ಸೇರಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಪತ್ತೆಯಾಗಿದೆ. ಶವದ ಮೇಲೆ ಗಾಯಗಳ ಗುರುತುಗಳು ಕಂಡುಬಂದಿದ್ದು, ಹತ್ಯೆಯ ಶಂಕೆಗೆ ಬಲ ನೀಡಿವೆ. ಈ ಹಿನ್ನೆಲೆಯಲ್ಲಿ ಅರ್ಜುನ್ ಶರ್ಮಾ (26) ವಿರುದ್ಧ ಪ್ರಥಮ ಹಾಗೂ ದ್ವಿತೀಯ ಹಂತದ ಕೊಲೆ ಆರೋಪಗಳನ್ನು ದಾಖಲಿಸಿ ಬಂಧನ ವಾರಂಟ್ ಜಾರಿಗೊಳಿಸಲಾಗಿದೆ.
ಇದನ್ನೂ ಓದಿ: Kitchen tips | ಹಸಿ ಬಟಾಣಿಯನ್ನು ಹಾಳಾಗದಂತೆ ವರ್ಷವಿಡೀ ಫ್ರೆಶ್ ಆಗಿ ಇಡಬಹುದು! ಈ ಟ್ರಿಕ್ಸ್ ಫಾಲೋ ಮಾಡಿ ಸಾಕು
ಜನವರಿ 2ರಂದು ನಿಕಿತಾ ಕಾಣೆಯಾಗಿದ್ದಾರೆ ಎಂದು ಅರ್ಜುನ್ ಶರ್ಮಾ ಪೊಲೀಸರಿಗೆ ದೂರು ನೀಡಿದ್ದ. ಡಿಸೆಂಬರ್ 31ರಂದು ಸಂಜೆ ಮೇರಿಲ್ಯಾಂಡ್‌ನ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ಆಕೆಯನ್ನು ಕೊನೆಯದಾಗಿ ನೋಡಿದ್ದೇನೆ ಎಂದು ಆತ ಹೇಳಿದ್ದ. ಈ ಮಾಹಿತಿ ಆಧರಿಸಿ ಪೊಲೀಸರು ಅಪಾರ್ಟ್‌ಮೆಂಟ್‌ನಲ್ಲಿ ಶೋಧ ಕಾರ್ಯ ನಡೆಸಿದಾಗ ನಿಕಿತಾ ಅವರ ಮೃತದೇಹ ಪತ್ತೆಯಾಗಿದೆ.
ನಾಪತ್ತೆ ದೂರು ನೀಡಿದ ದಿನವೇ ಅರ್ಜುನ್ ಶರ್ಮಾ ಭಾರತಕ್ಕೆ ವಿಮಾನದ ಮೂಲಕ ತೆರಳಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಡಿಸೆಂಬರ್ 31ರಂದು ಸಂಜೆ 7 ಗಂಟೆಯ ನಂತರವೇ ಕೊಲೆ ನಡೆದಿರಬಹುದು ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ.

