Saturday, January 10, 2026

ಕಾಲೇಜಿಗೆ ಹೋದವನು ಮನೆಗೆ ಮರಳಲೇ ಇಲ್ಲ: ಅಪ್ರಾಪ್ತ ವಿದ್ಯಾರ್ಥಿಯ ಕಿಡ್ನಾಪ್ ಶಂಕೆ!

ಹೊಸದಿಗಂತ ಅಂಕೋಲಾ:

ಕಾಲೇಜಿಗೆ ಹೋಗುವುದಾಗಿ ಮನೆಯಿಂದ ಹೊರಟಿದ್ದ ಅಪ್ರಾಪ್ತ ವಯಸ್ಸಿನ ಡಿಪ್ಲೊಮಾ ವಿದ್ಯಾರ್ಥಿಯೋರ್ವ ನಿಗೂಢವಾಗಿ ನಾಪತ್ತೆಯಾಗಿದ್ದು, ಆತನನ್ನು ಯಾರೋ ಪುಸಲಾಯಿಸಿ ಅಪಹರಿಸಿರುವ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ತಾಲೂಕಿನ ಸುಂಕಸಾಳ ಮರಾಠಿಕೊಪ್ಪ ನಿವಾಸಿಯಾದ ರಾಘವೇಂದ್ರ ಮಂಜುನಾಥ ಗಾಂವ್ಕರ್ (17) ಎಂಬಾತನೇ ನಾಪತ್ತೆಯಾದ ವಿದ್ಯಾರ್ಥಿ. ಈತ ಕಾರವಾರದ ಡಿಪ್ಲೊಮಾ ಕಾಲೇಜಿನಲ್ಲಿ ಪ್ರಥಮ ವರ್ಷದ ವ್ಯಾಸಂಗ ಮಾಡುತ್ತಿದ್ದನು. ಜನವರಿ 3ರಂದು ಎಂದಿನಂತೆ ಕಾಲೇಜಿಗೆಂದು ತೆರಳಿದ್ದ ರಾಘವೇಂದ್ರ, ಸಂಜೆಯಾದರೂ ಮನೆಗೆ ಮರಳದಿದ್ದಾಗ ಪೋಷಕರು ಆತಂಕಗೊಂಡಿದ್ದಾರೆ. ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ, ಯಾರೋ ಅಪರಿಚಿತರು ಆತನನ್ನು ಪುಸಲಾಯಿಸಿ ಅಪಹರಿಸಿರಬಹುದು ಎಂದು ತಂದೆ ಮಂಜುನಾಥ ಪ್ರಕಾಶ ಗಾಂವಕರ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಹುಡುಗನ ಗುರುತು ಮತ್ತು ಚಹರೆ:

ಎತ್ತರ: ಸುಮಾರು 5 ಅಡಿ 6 ಇಂಚು.

ಭಾಷೆ: ಕನ್ನಡ ಮತ್ತು ಕೊಂಕಣಿ ಮಾತನಾಡಬಲ್ಲವನಾಗಿದ್ದಾನೆ.

ಧರಿಸಿದ್ದ ಉಡುಪು: ಮನೆಯಿಂದ ಹೊರಡುವಾಗ ಹಸಿರು ಬಣ್ಣದ ಗೆರೆಗಳಿರುವ ಬಿಳಿ ಬಣ್ಣದ ಶರ್ಟ್, ಹಸಿರು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಚಪ್ಪಲಿ ಧರಿಸಿದ್ದನು.

ಈ ಹುಡುಗನ ಕುರಿತಾಗಿ ಯಾವುದೇ ಸುಳಿವು ಅಥವಾ ಮಾಹಿತಿ ದೊರೆತಲ್ಲಿ ಸಾರ್ವಜನಿಕರು ತಕ್ಷಣವೇ ಅಂಕೋಲಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕಾಗಿ ಕೋರಲಾಗಿದೆ.

error: Content is protected !!