ಹೊಸದಿಗಂತ ಡಿಜಿಟಲ್ ಡೆಸ್ಕ್:
ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಾರದ ಐದು ದಿನಗಳ ಕೆಲಸದ ಪದ್ಧತಿಯನ್ನು ಜಾರಿಗೆ ತರಬೇಕೆಂದು ಒತ್ತಾಯಿಸಿ ಬ್ಯಾಂಕ್ ಉದ್ಯೋಗಿಗಳು ಮತ್ತೊಮ್ಮೆ ಹೋರಾಟಕ್ಕೆ ಸಜ್ಜಾಗಿದ್ದಾರೆ. ವಿವಿಧ ಬ್ಯಾಂಕ್ ಒಕ್ಕೂಟಗಳ ಜಂಟಿ ವೇದಿಕೆಯಾದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ ಮುಂಬರುವ ಜನವರಿ 27ರಂದು ರಾಷ್ಟ್ರವ್ಯಾಪಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ.
ಈ ಕುರಿತು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಮಹಾಒಕ್ಕೂಟ ಜನವರಿ 4ರಂದು ಅಧಿಕೃತ ಸುತ್ತೋಲೆ ಹೊರಡಿಸಿದ್ದು, ಕೇಂದ್ರ ಸರ್ಕಾರದ ವಿಳಂಬ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.
ಸದ್ಯ ಬ್ಯಾಂಕುಗಳಲ್ಲಿ ಭಾನುವಾರದ ಜೊತೆಗೆ ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮಾತ್ರ ರಜೆ ನೀಡಲಾಗುತ್ತಿದೆ. ಆದರೆ, ಐಟಿ ವಲಯ ಹಾಗೂ ಇತರ ಸರ್ಕಾರಿ ಕಚೇರಿಗಳ ಮಾದರಿಯಲ್ಲಿ ವಾರದ ಎಲ್ಲ ಶನಿವಾರಗಳನ್ನು ರಜೆ ಎಂದು ಘೋಷಿಸಬೇಕು ಎಂಬುದು ಉದ್ಯೋಗಿಗಳ ದೀರ್ಘಕಾಲದ ಬೇಡಿಕೆಯಾಗಿದೆ.
2024ರ ಮಾರ್ಚ್‌ನಲ್ಲಿ ನಡೆದ ವೇತನ ಪರಿಷ್ಕರಣೆ ಮಾತುಕತೆಯ ಸಂದರ್ಭದಲ್ಲಿ, ಭಾರತೀಯ ಬ್ಯಾಂಕುಗಳ ಸಂಘಟನೆ ಈ ಬೇಡಿಕೆಗೆ ಒಪ್ಪಿಗೆ ನೀಡಿತ್ತು. ವಾರಕ್ಕೆ ಎರಡು ದಿನ ರಜೆ ನೀಡುವ ಬದಲಾಗಿ, ಉದ್ಯೋಗಿಗಳು ಪ್ರತಿದಿನ 40 ನಿಮಿಷ ಹೆಚ್ಚುವರಿ ಕೆಲಸ ಮಾಡಲು ಒಪ್ಪಿದ್ದರು.
ಹೀಗಿದ್ದರೂ, ಸರ್ಕಾರದಿಂದ ಈವರೆಗೆ ಯಾವುದೇ ಅಂತಿಮ ಅಧಿಸೂಚನೆ ಹೊರಬೀಳದ ಕಾರಣ ಬ್ಯಾಂಕ್ ನೌಕರರು ಈಗ ಅನಿವಾರ್ಯವಾಗಿ ಮುಷ್ಕರದ ಹಾದಿ ಹಿಡಿದಿದ್ದಾರೆ.
ಜನವರಿ 27ರ ಮುಷ್ಕರದಿಂದಾಗಿ ದೇಶಾದ್ಯಂತ ಹಣಕಾಸು ವಹಿವಾಟಿನಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಯಿದ್ದು, ಗ್ರಾಹಕರು ಮುನ್ನೆಚ್ಚರಿಕೆ ವಹಿಸಬೇಕೆಂದು ಸೂಚಿಸಲಾಗಿದೆ.

