Sunday, January 11, 2026

ಬಳ್ಳಾರಿ ಹಿಂಸಾಚಾರ: ಎಸ್‌ಪಿ ಪವನ್ ನೆಜ್ಜೂರು ಆತ್ಮಹತ್ಯೆ ಯತ್ನ: ಸಿಎಂ ವಿರುದ್ಧ ಆಕ್ರೋಶದ ಅಲೆ!

ಹೊಸದಿಗಂತ ಬೀದರ್:

ಬಳ್ಳಾರಿಯಲ್ಲಿ ನಡೆದ ಹಿಂಸಾಚಾರದ ಹಿನ್ನೆಲೆಯಲ್ಲಿ ‘ಕರ್ತವ್ಯ ಲೋಪ’ದ ಆರೋಪ ಹೊರಿಸಿ ಅಮಾನತುಗೊಳಿಸಲಾಗಿದ್ದ ಎಸ್‌ಪಿ ಪವನ್ ನೆಜ್ಜೂರು ಅವರು ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವುದು ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ತುಮಕೂರಿನ ತಮ್ಮ ನಿವಾಸದಲ್ಲಿ ಅತಿಯಾದ ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿರುವ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆಯ ಕುರಿತು ವಿ.ವಿ.ಕೆ. ಸಂಘದ ಸಂಚಾಲಕರಾದ ವಿ.ಕೆ. ದೇಶಪಾಂಡೆ ಮತ್ತು ಬಿಜೆಪಿ ವಿಭಾಗ ಪ್ರಮುಖ ಈಶ್ವರ ಸಿಂಗ್ ಠಾಕೂರ್ ರಾಜ್ಯ ಸರ್ಕಾರದ ವಿರುದ್ಧ ತೀವ್ರವಾಗಿ ಗುಡುಗಿದ್ದಾರೆ.

ಅಧಿಕಾರ ಸ್ವೀಕರಿಸಿದ ಕೇವಲ 24 ಗಂಟೆಯೊಳಗೆ ನಿಷ್ಠಾವಂತ ಅಧಿಕಾರಿಯನ್ನು ಅಮಾನತು ಮಾಡಿದ್ದು ಎಷ್ಟು ಸರಿ? ಸ್ವಪಕ್ಷೀಯ ಶಾಸಕರ ತಪ್ಪುಗಳನ್ನು ಮುಚ್ಚಿ ಹಾಕಲು ಅಧಿಕಾರಿಯನ್ನು ಬಲಿಪಶು ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

“ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಧರ್ಮವನ್ನು ಮರೆತಿದ್ದಾರೆ. ಹಿಂಸಾಚಾರಕ್ಕೆ ಕಾರಣರಾದವರನ್ನು ಬಿಟ್ಟು, ಗಲಭೆಯನ್ನು ನಿಯಂತ್ರಿಸಿದ ಅಧಿಕಾರಿಯನ್ನೇ ಅಮಾನತು ಮಾಡಿರುವುದು ದರ್ಪದ ಪರಮಾವಧಿ” ಎಂದು ಆಕ್ರೋಶ ಹೊರಹಾಕಿದ್ದಾರೆ.

ಅಧಿಕಾರದ ಅಮಲಿನಲ್ಲಿ ರಾಜ್ಯ ನಡೆಸುತ್ತಿರುವ ಸಿದ್ದರಾಮಯ್ಯ ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಆಸ್ಪತ್ರೆಗೆ ದಾಖಲಾಗಿರುವ ಅಧಿಕಾರಿಯನ್ನು ಭೇಟಿ ಮಾಡುವ ಸೌಜನ್ಯವೂ ಇಲ್ಲದವರು ಆಡಳಿತ ನಡೆಸುತ್ತಿರುವುದು ರಾಜ್ಯದ ದುರ್ದೈವ ಎಂದು ಕಿಡಿಕಾರಿದ್ದಾರೆ.

ಬಳ್ಳಾರಿಯ ಗಲಭೆಯನ್ನು ತಡೆದ ಅಧಿಕಾರಿಯ ಮೇಲೆ ಕ್ರಮ ಜರುಗಿಸಿರುವುದು ಪೊಲೀಸ್ ವಲಯದಲ್ಲೂ ಅಸಮಾಧಾನಕ್ಕೆ ಕಾರಣವಾಗಿದ್ದು, ರಾಜಕೀಯ ಸಂಘರ್ಷಕ್ಕೆ ಹೊಸ ತಿರುವು ನೀಡಿದೆ.

error: Content is protected !!