ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (KSRTC) ಬಸ್ ಪ್ರಯಾಣಿಕರಿಗೆ ರಿಲೀಫ್ ನೀಡಿದೆ. ಜನವರಿ 5ರಿಂದ ಮಾರ್ಚ್ ಅಂತ್ಯದವರೆಗೆ ಆಯ್ದ ಪ್ರೀಮಿಯರ್ ಬಸ್‌ಗಳ ಟಿಕೆಟ್ ದರವನ್ನು ಶೇ.10ರಿಂದ ಶೇ.15ರ ವರೆಗೆ ಕಡಿತಗೊಳಿಸುವುದಾಗಿ ಕೆಎಸ್‌ಆರ್‌ಟಿಸಿ ಅಧಿಕೃತ ಪ್ರಕಟಣೆ ಹೊರಡಿಸಿದೆ.
ಪ್ರಯಾಣಿಕರ ದಟ್ಟಣೆ ಸಾಮಾನ್ಯವಾಗಿ ಜನವರಿ–ಮಾರ್ಚ್ ಅವಧಿಯಲ್ಲಿ ಇಳಿಕೆಯಾಗುವುದನ್ನು ಗಮನದಲ್ಲಿಟ್ಟುಕೊಂಡು ಈ ತೀರ್ಮಾನ ಕೈಗೊಳ್ಳಲಾಗಿದೆ. ಕ್ರಿಸ್‌ಮಸ್ ರಜೆ ಮುಗಿಯುವುದು, ಶಾಲಾ–ಕಾಲೇಜುಗಳು ನಡೆಯುವುದು ಹಾಗೂ ಪರೀಕ್ಷಾ ಕಾಲ ಆರಂಭವಾಗುವುದು ಬಸ್‌ಗಳ ಟಿಕೆಟ್ ದರ ಕಡಿತಕ್ಕೆ ಕಾರಣ. ಖಾಲಿ ಸೀಟುಗಳ ಸಂಖ್ಯೆಯನ್ನು ಕಡಿಮೆ ಮಾಡಿ ಖಾಸಗಿ ಬಸ್‌ಗಳ ಸ್ಪರ್ಧೆಗೆ ತಕ್ಕಂತೆ ಪ್ರಯಾಣಿಕರನ್ನು ಸೆಳೆಯುವ ಉದ್ದೇಶದಿಂದ ಈ ದರ ಇಳಿಕೆ ಮಾಡಲಾಗಿದೆ.
ಇದನ್ನೂ ಓದಿ: Kitchen tips | ಬೇಯಿಸಿದ ಮೊಟ್ಟೆಗಳನ್ನ ಫ್ರಿಜ್‌ನಲ್ಲಿ ಎಷ್ಟು ದಿನ ಇಡಬಹುದು? ಫ್ರೆಶ್ ಆಗಿರಬೇಕೆಂದ್ರೆ ಏನು ಮಾಡ್ಬೇಕು?
ಬೆಂಗಳೂರುದಿಂದ ರಾಜ್ಯದ ವಿವಿಧ ಭಾಗಗಳು ಹಾಗೂ ಅಂತರರಾಜ್ಯ ಮಾರ್ಗಗಳಿಗೆ ಸಂಚರಿಸುವ ರಾಜಹಂಸ, ಐರಾವತ, ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಎಸಿ ಹಾಗೂ ನಾನ್ ಎಸಿ ಸ್ಲೀಪರ್ ಬಸ್‌ಗಳ ಟಿಕೆಟ್ ದರದಲ್ಲಿ ರಿಯಾಯಿತಿ ನೀಡಲಾಗಿದೆ. ಇದಲ್ಲದೆ ಬೆಂಗಳೂರು ವಿಮಾನ ನಿಲ್ದಾಣ ಫ್ಲೈ ಬಸ್‌ಗಳ ದರವೂ ಇಳಿಕೆ ಕಂಡಿದೆ.
ಮಂಗಳೂರು, ಉಡುಪಿ, ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ, ಮಡಿಕೇರಿ, ಶಿವಮೊಗ್ಗ, ಚೆನ್ನೈ, ಹೈದರಾಬಾದ್, ತಿರುಪತಿ, ಮುಂಬೈ, ಪುಣೆ ಸೇರಿದಂತೆ ಕೆಲವು ಆಯ್ದ ಮಾರ್ಗಗಳಲ್ಲಿ ಮಾತ್ರ ಈ ರಿಯಾಯಿತಿ ಅನ್ವಯವಾಗಲಿದೆ. ಈ ಕ್ರಮದಿಂದ ಪ್ರಯಾಣಿಕರಿಗೆ ಆರ್ಥಿಕವಾಗಿ ಸಹಾಯವಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.

