ಹೊಸದಿಗಂತ ವರದಿ ಹುಬ್ಬಳ್ಳಿ:
ಇಲ್ಲಿಯ ಚಾಲುಕ್ಯ ನಗರದಲ್ಲಿ ಮತದಾರರ ಮ್ಯಾಪಿಂಗ್ ಮಾಡುವ ಸಲುವಾಗಿ ನಡೆದ ಗಲಾಟೆಯೂ ಈಗ ರಾಜಕೀಯ ತಿರುವು ಪಡೆದಿದ್ದು, ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿದೆ.
ಕೆಲ ದಿನಗಳ ಹಿಂದೆ ಹು-ಧಾ ಸೆಂಟ್ರಲ್ ಕ್ಷೇತ್ರದ ವ್ಯಾಪ್ತಿಯ ಚಾಲುಕ್ಯನಗರದಲ್ಲಿ ಬ್ಲಾಲ್ ಮಟ್ಟದ ಅಧಿಕಾರಿ(ಬಿಎಲ್ಒ) ಜೊತೆ ಸಂಬಂಧವಿಲ್ಲದ ವ್ಯಕ್ತಿಗಳು ಸಮೀಕ್ಷೆಗೆ ತೆರಳಿದ್ದರು. ಈ ವೇಳೆ ಸ್ಥಳೀಯರೊಂದಿಗೆ ಗಲಾಟೆ ನಡೆದು, ಅದನ್ನು ಪ್ರಶ್ನಿಸಿದ ಪಾಲಿಕೆ ಕಾಂಗ್ರೆಸ್ ಸದಸ್ಯೆ ಸುವರ್ಣ ಕಲ್ಲಕುಂಟ್ಲಾ ಮೇಲೆ ಹಲ್ಲೆ ಕೆಲವರು ಹಲ್ಲೆ ನಡೆಸಿರುವುದಾಗಿ ಆರೋಪಿಸಿ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದವು.
ಈ ದೂರು ಆಧರಿಸಿ ಹಲ್ಲೆ ನಡೆಸಿದ ಬಿಜೆಪಿ ಕಾರ್ಯಕರ್ತೆ ಸುಜಾತ ಹಂಡಿ ಅವರನ್ನು ಪೊಲೀಸರು ಬಂಧಿಸುವಾಗ ವಿವಸ್ತ್ರಗೊಳಿಸಿ ಅವಮಾನ ಮಾಡಿದ್ದಾರೆ. ಕಾಂಗ್ರೆಸ್ ಮುಖಂಡರ ಮಾತು ಕೇಳಿ ಅಮಾನುಷವಾಗಿ ವರ್ತಿಸಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಪ್ರತಿಕ್ರಿಯಿಸಿ, ಪೊಲೀಸರು ಸುಜಾತ ಅವರನ್ನು ವಶಕ್ಕೆ ಪಡೆಯುವಾಗ ಅವರೇ ಮೇಲೆ ಹಲ್ಲೆ ನಡೆಸಿದ್ದಾರೆ. ಮಹಿಳಾ ಸಿಬ್ಬಂದಿ ಹಾಗೂ ಪುರುಷ ಸಿಬ್ಬಂದಿಯನ್ನು ನೂಕಿ ತಪ್ಪಿಸಿಕೊಳ್ಳಲು ಯತ್ನಿಸಿದ್ದರು. ದೊಡ್ಡ ಮಟ್ಟದಲ್ಲಿ ಡ್ರಾಮಾ ಮಾಡಿದ್ದರು. ನಂತರ ಅವರನ್ನು ವಾಹನಕ್ಕೆ ಹತ್ತಿಸಿದಾಗ ತಾವೇ ಬಟ್ಟೆಯನ್ನು ಬಿಚ್ಚಿಕೊಂಡಿದ್ದರು. ಆಗ ನಮ್ಮ ಸಿಬ್ಬಂದಿ ಬೇರೆ ಬಟ್ಟೆ ತಂದು ಕೊಟ್ಟಿದ್ದಾರೆ ಎಂದರು.
ಎಸ್‌ಐಆರ್ ಪೂರ್ವ ನಡೆಯವ ಸಮೀಕ್ಷೆ ಸಂದರ್ಭ ನಮ್ಮ ಪಕ್ಷದ ಕಾರ್ಯಕರ್ತೆ ಸುಜಾತಾ ಹಂಡಿ ಅವರು ಬಿಎಲ್‌ಒ ಅವರಿಗೆ ಮನೆಗಳನ್ನು ತೋರಿಸಲು ಸಹಾಯ ಮಾಡುತ್ತಿದ್ದರು. ಆಗ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಸಮೀಕ್ಷೆಗೆ ಆಕ್ಷೇಪ ವ್ಯಕ್ತಪಡಿಸಿ, ಧಮಕಿ ಹಾಕಿದ್ದರು. ಆ ಪ್ರದೇಶದಲ್ಲಿ ಸಾಕಷ್ಟು ಮಂದಿ ವಲಸಿಗರು ಕಾನೂನು ಬಾಹಿರವಾಗಿ ವಾಸಿಸುತ್ತಿದ್ದಾರೆ. ಅವರು ಮತದಾರರ ಚೀಟಿ ಪಡೆದಿರುವುದು ಬಹಿರಂಗವಾಗುತ್ತದೆ ಎಂದು ಕಾಂಗ್ರೆಸ್ ಗಲಾಟೆ ಮಾಡುತ್ತಿದೆ ಎಂದು ಆರೋಪಿಸಿದರು.
ಎಸ್‌ಐಆರ್ ನೆಪದಲ್ಲಿ ಬಿಎಲ್‌ಒ ಒಬ್ಬರು ಸ್ಥಳೀಯ ಬಿಜೆಪಿ ಕಾರಗಯಕರ್ತರನ್ನು ಕರೆದುಕೊಂಡು ಮನೆಮನೆಗೆ ತೆರಳಿ ಸಮೀಕ್ಷೆ ನಡೆಸುತ್ತಿದ್ದರು. ಆಗ ಆರಂಭವಾದ ಗದ್ದಲದಲ್ಲಿ ಸುಜಾತಾ ಹಂಡಿ ಅವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಗೂ ಪಾಲಿಕೆ ಸದಸ್ಯೆ ಸುವರ್ಣ ಕಲಕುಂಟ್ಲ ಅವರ ಮೇಲೂ ಹಲ್ಲೆಗೆ ಯತ್ನಿಸಿದ್ದರು ಎಂದು ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಮ್ಯಾಪಿಂಗ್ ಮಾಡುವಾಗ ಆದ ಗಲಾಟೆಗೆ ರಾಜಕೀಯ ತಿರುವು: ಕೈ-ಬಿಜೆಪಿ ಮಧ್ಯೆ ಗುದ್ದಾಟ

