Saturday, January 10, 2026

ಮತ್ತೆ ಸುದ್ದಿಯಲ್ಲಿ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ: ಈ ಬಾರಿ ಹೇಳಿದ್ದೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೀದಿನಾಯಿಗಳ ಪರ ಮಾತನಾಡುವ ಭರದಲ್ಲಿ ಪುರುಷ ಸಮೂಹವನ್ನು ಅವಮಾನಿಸಿದ್ದಾರೆ ಎನ್ನುವ ಆರೋಪ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾಗೆ ಬಂದಿದೆ.

ಈ ಹಿಂದೆಯೂ ನೇರ ಮಾತು, ಬೋಲ್ಡ್‌ ಹೇಳಿಕೆಯ ಮೂಲಕ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಬೀದಿ ನಾಯಿ ಬಗ್ಗೆ ಸುಪ್ರೀಂ ಕೋರ್ಟ್‌ ನೀಡಿದ ಆದೇಶವನ್ನು ಉಲ್ಲೇಖಿಸಿದ ಅವರು, ಪುರುಷರು ಯಾವಾಗ ಅತ್ಯಾಚಾರ ಎಸಗುತ್ತಾರೆ/ಕೊಲೆ ಮಾಡುತ್ತಾರೆ ಎನ್ನುವುದನ್ನು ಅವರ ಮನಸ್ಥಿತಿ ಓದಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಹಾಗಂತ ಎಲ್ಲ ಪುರುಷರನ್ನು ಜೈಲಿಗೆ ಹಾಕಲು ಸಾಧ್ಯವೆ? ಎಂದು ಅವರು ಪ್ರಶ್ನಿಸಿದ್ದು ವಿವಾದಕ್ಕೆ ಕಾರಣವಾಗಿದೆ.

ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಅವರು ತಮ್ಮ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ನಾಯಿಗಳ ಹಾವಳಿ ಬಗ್ಗೆ ಇತ್ತೀಚೆಗೆ ಅಭಿಪ್ರಾಯ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್‌ ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ ಎಂದು ಹೇಳಿತ್ತು. ಇದನ್ನು ಉಲ್ಲೇಖಿಸಿ ರಮ್ಯಾ ಈ ಹೇಳಿಕೆ ನೀಡಿದ್ದಾರೆ.

ಅಷ್ಟಕ್ಕೂ ಆಗಿದ್ದೇನು?
ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಪ್ರಕರಣದಲ್ಲಿ ಹಲವು ಮಧ್ಯಂತರ ಅರ್ಜಿಗಳನ್ನು ಆಲಿಸಿ, ಹೆದ್ದಾರಿಗಳಲ್ಲಿ ಪ್ರಾಣಿಗಳ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುವಂತೆ ಸೂಚಿಸಿತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು, ಬೀದಿ ನಾಯಿಗಳ ಮನಸ್ಸನ್ನು ಯಾರಿಗೂ ಓದಲು ಸಾಧ್ಯವಿಲ್ಲ. ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ ಎಂದು ​ ಅಭಿಪ್ರಾಯಪಟ್ಟಿದ್ದರು.

ಪುರುಷರನ್ನು ಬೀದಿ ನಾಯಿಗೆ ಹೋಲಿಸಿದ್ರಾ?
ಸದ್ಯ ಈ ಹೇಳಿಕೆ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದೆ. ರಮ್ಯಾ ಪುರುಷರನ್ನು ಬೀದಿ ನಾಯಿಗೆ ಹೊಲೀಸಿದ್ದಾರೆ ಎಂದು ಒಂದಷ್ಟು ಮಂದಿ ಆರೋಪಿಸಿದ್ದಾರೆ. ರಮ್ಯಾ ಪ್ರಕಾರ ಯಾವ ಪುರುಷನೂ ಉತ್ತಮ ಗುಣ ಹೊಂದಿಲ್ಲವೆ? ಎಂದೆಲ್ಲ ಪ್ರಶ್ನಿಸುತ್ತಿದ್ದಾರೆ. ಹಿಂದಿನಿಂದಲೂ ರಮ್ಯಾ ಬೀದಿ ನಾಯಿಗಳ ಬಗೆ ಧ್ವನಿ ಎತ್ತುತ್ತಲೇ ಬಂದಿದ್ದಾರೆ.

error: Content is protected !!