Saturday, January 10, 2026

ಬದ್ಧವೈರಿ ಕಾಂಗ್ರೆಸ್ ಜತೆ ಮೈತ್ರಿಗೆ ಬಿತ್ತು ಬ್ರೇಕ್: ಅಖಾಡಕ್ಕೆ ‘ಮಹಾ’ ಸಿಎಂ ಫಡ್ನವೀಸ್ ಎಂಟ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಅಂಬರ್ನಾಥ್ ಪುರಸಭೆಯಲ್ಲಿ ಬದ್ಧವೈರಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಚುನಾವಣೋತ್ತರ ಮೈತ್ರಿ ಮಾಡಿಕೊಂಡಿವೆ. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಬುಧವಾರ ತನ್ನ 12 ಹೊಸ ಕೌನ್ಸಿಲರ್‌ಗಳನ್ನು ಪಕ್ಷದಿಂದ ಅಮಾನತುಗೊಳಿಸಿದೆ.

ಇತ್ತ ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು ಕಾಂಗ್ರೆಸ್ ಜೊತೆಗಿನ ಯಾವುದೇ ಮೈತ್ರಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂತಹ ಒಪ್ಪಂದವನ್ನು “ಸ್ವೀಕಾರಾರ್ಹವಲ್ಲ” ಎಂದು ಕರೆದಿದ್ದಾರೆ.

ಅಂಬರ್ನಾಥ್‌ನಲ್ಲಿ ಸ್ಥಳೀಯ ಮಟ್ಟದಲ್ಲಿ ಬಿಜೆಪಿ (BJP) ನಾಯಕರು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಫಡ್ನವೀಸ್ ಅಸಮಾಧಾನ ಹೊರಹಾಕಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರವನ್ನು ಸರಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ಕಾಂಗ್ರೆಸ್ ಮುಕ್ತ ಭಾರತ”ಕ್ಕಾಗಿ ಬಿಜೆಪಿಯ ದೀರ್ಘಕಾಲದ ಅಭಿಯಾನದ ಹೊರತಾಗಿಯೂ ಮುಂಬೈನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಅಂಬರ್ನಾಥ್​​ನಲ್ಲಿ ಶಿವಸೇನೆಯ ಶಿಂಧೆ ಬಣವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದಾಗಿ ಬಿಜೆಪಿ-ಕಾಂಗ್ರೆಸ್ ಮೈತ್ರಿಯು ರಾಜಕೀಯ ವಲಯಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅಲ್ಲಿನ ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟಕ್ಕೆ ಅಂಬರ್ನಾಥ್ ವಿಕಾಸ್ ಅಘಾಡಿ ಎಂದು ಹೆಸರಿಸಲಾಗಿದೆ. ಈ ಬೆಳವಣಿಗೆಗಳು ಶಿವಸೇನೆಯ ಶಿಂಧೆ ಬಣದಲ್ಲಿ ಗಮನಾರ್ಹ ಅಸಮಾಧಾನವನ್ನು ಉಂಟುಮಾಡಿದೆ.

ಶಿವಸೇನೆಯ ಶಿಂಧೆ ಬಣದ ಭದ್ರಕೋಟೆ ಎಂದು ಅಂಬರ್ನಾಥ್ ಪರಿಗಣಿಸಲಾಗಿದೆ. ಏಕನಾಥ್ ಶಿಂಧೆ ಅವರ ಮಗ ಶ್ರೀಕಾಂತ್ ಶಿಂಧೆ ಈ ಕ್ಷೇತ್ರದ ಸಂಸದರಾಗಿದ್ದಾರೆ. ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಶಿಂಧೆ ಬಣವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು.

error: Content is protected !!