Friday, January 9, 2026

ಛತ್ತೀಸ್‌ಗಢದಲ್ಲಿ ಶಸ್ತ್ರ ತ್ಯಜಿಸಿದ ನಕ್ಸಲರು: 26 ಮಾವೋವಾದಿಗಳು ಪೊಲೀಸರಿಗೆ ಶರಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ಇಂದು 26 ಮಾವೋವಾದಿಗಳು ಶರಣಾಗಿದ್ದಾರೆ.

ರಾಜ್ಯದ ಪೂನಾ ಮಾರ್ಗೆಮ್ (ಪುನರ್ವಸತಿಯಿಂದ ಸಾಮಾಜಿಕ ಪುನರ್ಜೋಡಣೆಯವರೆಗೆ) ಉಪಕ್ರಮದಡಿ ಏಳು ಮಹಿಳೆಯರು ಸೇರಿದಂತೆ 26 ಕಾರ್ಯಕರ್ತರು ಹಿರಿಯ ಪೊಲೀಸ್ ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (CRPF) ಅಧಿಕಾರಿಗಳ ಮುಂದೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದರು ಎಂದು ಸುಕ್ಮಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಕಿರಣ್ ಚವಾಣ್ ತಿಳಿಸಿದ್ದಾರೆ.

ಅವರಲ್ಲಿ 13 ಮಂದಿ 65 ಲಕ್ಷ ರುಪಾಯಿ ಮೊತ್ತದ ಇನಾಮು ಹೊಂದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾದ ಮಾವೋವಾದಿಗಳು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್‌ಜಿಎ) ಬೆಟಾಲಿಯನ್, ದಕ್ಷಿಣ ಬಸ್ತರ್ ವಿಭಾಗ, ಮಾದ್ ವಿಭಾಗ ಮತ್ತು ಆಂಧ್ರ-ಒಡಿಶಾ ಗಡಿ (ಎಒಬಿ) ವಿಭಾಗದಲ್ಲಿ ಸಕ್ರಿಯರಾಗಿದ್ದರು ಮತ್ತು ಅಬುಜ್ಮದ್, ಸುಕ್ಮಾ ಮತ್ತು ಒಡಿಶಾದ ಪಕ್ಕದ ಪ್ರದೇಶಗಳಲ್ಲಿ ಹಲವು ಹಿಂಸಾಚಾರ ಘಟನೆಗಳಲ್ಲಿ ಭಾಗಿಯಾಗಿದ್ದರು.

ಅವರಲ್ಲಿ ಲಾಲಿ ಅಲಿಯಾಸ್ ಮುಚಕಿ ಆಯ್ತೆ ಲಖ್ಮು (35) ಎಂಬಾಕೆ ಕಂಪನಿ ಪಾರ್ಟಿ ಸಮಿತಿಯ ಸದಸ್ಯೆಯಾಗಿದ್ದು, ಆಕೆಯ ಮೇಲೆ 10 ಲಕ್ಷ ರುಪಾಯಿ ಬಹುಮಾನ ಘೋಷಿಸಲಾಗಿತ್ತು. 2017ರಲ್ಲಿ ಒಡಿಶಾದ ಕೊರಾಪುಟ್ ರಸ್ತೆಯಲ್ಲಿ ನಡೆದ ಐಇಡಿ ಸ್ಫೋಟ ಸೇರಿದಂತೆ ಹಲವು ಪ್ರಮುಖ ವಿದ್ವಂಸಕ ಕೃತ್ಯಗಳಲ್ಲಿ ಅವರು ಭಾಗಿಯಾಗಿದ್ದರು ಎನ್ನಲಾಗಿದ್ದು, ಆ ಸ್ಫೋಟದಲ್ಲಿ 14 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.

ಪೊಲೀಸರ ಪ್ರಕಾರ, ನಿರಂತರ ಭದ್ರತಾ ಕಾರ್ಯಾಚರಣೆಗಳು ಹಾಗೂ ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರಭಾವಿತರಾಗಿದ್ದೇವೆ ಎಂದು ಕಾರ್ಯಕರ್ತರು ಹೇಳಿದ್ದಾರೆ.

ನಾಲ್ವರು ಪ್ರಮುಖ ಮಾವೋವಾದಿಗಳಾದ ಹೇಮ್ಲಾ ಲಖ್ಮಾ (41), ಆಸ್ಮಿತಾ ಅಲಿಯಾಸ್ ಕಮ್ಲು ಸನ್ನಿ (20), ರಂಬಾಟಿ ಅಲಿಯಾಸ್ ಪದಮ್ ಜೋಗಿ (21) ಮತ್ತು ಸುಂದಮ್ ಪಾಲೆ (20) ತಲಾ 8 ಲಕ್ಷ ರುಪಾಯಿ ಇನಾಮು ಹೊಂದಿದ್ದರು. ಲಖ್ಮಾ 2020ರಲ್ಲಿ ಸುಕ್ಮಾದ ಮಿನ್‌ಪಾ ಪ್ರದೇಶದಲ್ಲಿ ನಡೆದ ಅಂಬುಷ್ ದಾಳಿಯಲ್ಲಿ ಭಾಗಿಯಾಗಿದ್ದ ಎನ್ನಲಾಗಿದ್ದು, ಆ ದಾಳಿಯಲ್ಲಿ 17 ಭದ್ರತಾ ಸಿಬ್ಬಂದಿ ಮೃತಪಟ್ಟಿದ್ದರು.

ಶರಣಾದ ಉಳಿದ ಮಾವೋವಾದಿಗಳಲ್ಲಿ ಮೂವರಿಗೆ ತಲಾ 5 ಲಕ್ಷ ರೂಪಾಯಿ, ಒಬ್ಬನಿಗೆ 3 ಲಕ್ಷ ರೂಪಾಯಿ, ಮತ್ತೊಬ್ಬನಿಗೆ 2 ಲಕ್ಷ ರುಪಾಯಿ ಮತ್ತು ಮೂವರಿಗೆ ತಲಾ 1 ಲಕ್ಷ ರುಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಾದ ಎಲ್ಲ ಮಾವೋವಾದಿಗಳಿಗೆ ತಲಾ 50,000 ರುಪಾಯಿ ತಕ್ಷಣದ ಸಹಾಯ ನೀಡಲಾಯಿತು ಮತ್ತು ಸರ್ಕಾರದ ನೀತಿಯ ಪ್ರಕಾರ ಅವರಿಗೆ ಮತ್ತಷ್ಟು ಪುನರ್ವಸತಿ ಕಲ್ಪಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

error: Content is protected !!