Saturday, January 10, 2026

ಗ್ರಾಮೀಣ ಶಿಕ್ಷಣಕ್ಕೆ ‘ಸರ್ಕಾರಿ’ ಬಲ: ರಾಜ್ಯಾದ್ಯಂತ 900 ಕರ್ನಾಟಕ ಪಬ್ಲಿಕ್ ಶಾಲೆಗಳ ಸ್ಥಾಪನೆ!

ಹೊಸದಿಗಂತ ಕಲಬುರಗಿ

ಹಳ್ಳಿ ಮಕ್ಕಳಿಗೆ ಖಾಸಗಿ ಕಾನ್ವೆಂಟ್ ಶಾಲೆ ಮೀರಿಸುವ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಬದ್ದವಾಗಿದ್ದು, ಆಯವ್ಯಯದಲ್ಲಿ ಘೋಷಿಸಿದಂತೆ ಮುಂದಿನ ದಿನದಲ್ಲಿ ರಾಜ್ಯದಾದ್ಯಂತ 900 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಿಸಲಾಗುತ್ತದೆ ಎಂದು ಶಾಲಾ‌ ಶಿಕ್ಷಣ ಮತ್ತು ಸಾಕ್ಷರತೆ ಸಚಿವ‌ ಎಸ್.ಮಧು ಬಂಗಾರಪ್ಪ ಹೇಳಿದರು.

ಬುಧವಾರ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ‌ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಾಲಾ ಶಿಕ್ಷಣ ಇಲಾಖೆಯಿಂದ 600, ಹಿಂದುಳಿದ, ಅಲ್ಪಸಂಖಾತ ಕಲ್ಯಾಣ ಇಲಾಖೆ ಹಾಗೂ ಸಿ.ಎಸ್.ಆರ್. ನಿಧಿಯಡಿ ತಲಾ 100 ಸೇರಿ 900 ಶಾಲೆ ನಿರ್ಮಿಸಲಾಗುತ್ತದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಲಾಖೆಯಿಂದ 100 ಸಂಖ್ಯೆ ಜೊತೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಹೆಚ್ಚುವರಿಯಾಗಿ 200 ಶಾಲೆ ಅಸ್ತಿತ್ವಕ್ಕೆ ಬರಲಿವೆ ಎಂದರು.

ಹೊಸದಾಗಿ 900 ಕೆ.ಪಿ.ಎಸ್. ಶಾಲೆ ಜೊತೆಗೆ ಪ್ರಸ್ತುತ ಅಸ್ತಿತ್ವದಲ್ಲಿರುವ 309 ಮಾದರಿ ಶಾಲೆಗೆ ಹೆಚ್ಚಿನ ಅನುದಾನ ನೀಡಿ ಮೂಲಸೌಕರ್ಯ ಬಲವರ್ಧನೆ ಮಾಡಲಾಗುವುದು. ಕೆ.ಪಿ.ಎಸ್. ಶಾಲೆಯಲ್ಲಿನ ಶಿಕ್ಷಕರಿಗೆ ಅಗತ್ಯಕ್ಕನುಗುಣವಾಗಿ ತರಬೇತಿ ಸಹ ನೀಡುವ ಕಾರ್ಯ ನಡೆದಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ರಾಹುಲ ಪಾಂಡ್ವೆ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಇದ್ದರು.

error: Content is protected !!