ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ ಪರಿಸರ ಸಂರಕ್ಷಣಾ ಚಳವಳಿಗೆ ದಿಕ್ಕು ನೀಡಿದ ಹಿರಿಯ ಪರಿಸರ ವಿಜ್ಞಾನಿ ಮಾಧವ ಗಾಡ್ಗೀಳ್ ಅವರು ಪುಣೆಯಲ್ಲಿ ನಿಧನರಾಗಿದ್ದಾರೆ. 83 ವರ್ಷದ ಗಾಡ್ಗೀಳ್ ಅವರು ಕೆಲವು ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ತಮ್ಮ ನಿವಾಸದಲ್ಲೇ ಕೊನೆಯುಸಿರೆಳೆದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಅವರು, ಪರಿಸರ ಮತ್ತು ಅಭಿವೃದ್ಧಿಯ ನಡುವೆ ಸಮತೋಲನ ಅಗತ್ಯವೆಂದು ಸದಾ ಎಚ್ಚರಿಸುತ್ತಿದ್ದರು.
ಇದನ್ನೂ ಓದಿ: FOOD | ಮಂಗಳೂರು ಸ್ಟೈಲ್ ಮಶ್ರೂಮ್ ಪೆಪ್ಪರ್ ಡ್ರೈ: ತುಂಬಾನೇ ರುಚಿಯಾಗಿರುತ್ತೆ, ಟ್ರೈ ಮಾಡಿ
ಐದು ದಶಕಗಳಿಗೂ ಹೆಚ್ಚು ಕಾಲ ಭಾರತೀಯ ಪರಿಸರ ನೀತಿ ಮತ್ತು ವಿಜ್ಞಾನ ಚಿಂತನೆಗೆ ಮಾರ್ಗದರ್ಶಕರಾಗಿದ್ದ ಗಾಡ್ಗೀಳ್, 1983ರಲ್ಲಿ ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಪರಿಸರ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಿದರು. ಅವರ ನಾಯಕತ್ವದಲ್ಲಿ ಈ ಕೇಂದ್ರವು ದೇಶದ ಪ್ರಮುಖ ಸಂಶೋಧನಾ ಸಂಸ್ಥೆಯಾಗಿ ಬೆಳೆಯಿತು.
2010ರಲ್ಲಿ ರಚಿಸಲಾದ ಪಶ್ಚಿಮ ಘಟ್ಟಗಳ ಪರಿಸರ ತಜ್ಞರ ಸಮಿತಿಗೆ (WGEEP) ಅಧ್ಯಕ್ಷರಾಗಿದ್ದ ಅವರು, ಗಣಿಗಾರಿಕೆ, ದೊಡ್ಡ ಅಣೆಕಟ್ಟುಗಳು ಹಾಗೂ ಮಾಲಿನ್ಯಕಾರಿ ಕೈಗಾರಿಕೆಗಳ ಮೇಲೆ ಕಟ್ಟುನಿಟ್ಟಿನ ನಿಯಂತ್ರಣ ಅಗತ್ಯವೆಂದು ಶಿಫಾರಸು ಮಾಡಿದ್ದರು. ಈ ವರದಿ ಪರಿಸರವಾದಿಗಳ ಪ್ರಶಂಸೆಗೆ ಪಾತ್ರವಾದರೂ, ಹಲವು ರಾಜ್ಯ ಸರ್ಕಾರಗಳಿಂದ ವಿರೋಧ ಎದುರಿಸಿತು.
1942ರಲ್ಲಿ ಪುಣೆಯಲ್ಲಿ ಜನಿಸಿದ ಗಾಡ್ಗೀಳ್, ಫರ್ಗ್ಯೂಸನ್ ಕಾಲೇಜು, ಮುಂಬಯಿ ವಿಶ್ವವಿದ್ಯಾಲಯ ಹಾಗೂ ಹಾರ್ವರ್ಡ್ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾಭ್ಯಾಸ ಮಾಡಿದ್ದರು. 1973ರಿಂದ ಐಐಎಸ್‌ಸಿಯಲ್ಲಿ ಸೇವೆ ಸಲ್ಲಿಸಿ 2004ರಲ್ಲಿ ನಿವೃತ್ತರಾದ ಅವರು, ನೀಲಗಿರಿ ಅರಣ್ಯವನ್ನು ಜೈವಿಕ ಅರಣ್ಯವನ್ನಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಅವರ ಅಗಲಿಕೆ ದೇಶದ ಪರಿಸರ ಚಿಂತನೆಗೆ ಅಪಾರ ನಷ್ಟವಾಗಿದೆ.

