Friday, January 9, 2026

ಸರ್ಕಾರದ ವೆಚ್ಚದಲ್ಲೇ ನೀರು, ಉಚಿತ ಚಿಕಿತ್ಸೆ: ಇಂದೋರ್ ದುರಂತದ ಬೆನ್ನಲ್ಲೇ ನ್ಯಾಯಾಲಯದ ಬಿಗಿ ಕ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಇಂದೋರ್‌ನಲ್ಲಿ ಕಲುಷಿತ ನೀರು ಸೇವನೆಯಿಂದ ಉಂಟಾದ ದುರಂತದ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿರುವ ನ್ಯಾ. ವಿಜಯ್ ಕುಮಾರ್ ಶುಕ್ಲಾ ಮತ್ತು ಅಲೋಕ್ ಅವಸ್ಥಿ ಅವರಿದ್ದ ಪೀಠವು, ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ನೇರವಾಗಿ ವಿವರಣೆ ನೀಡುವಂತೆ ಸೂಚಿಸಿದೆ.

ಮುಂದಿನ ವಿಚಾರಣೆಯ ದಿನದಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಹಾಜರಾಗಿ, ರಾಜ್ಯಾದ್ಯಂತ ಇಂತಹ ಘಟನೆಗಳು ಮರುಕಳಿಸದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸಮಗ್ರ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಆದೇಶಿಸಲಾಗಿದೆ.

ನೀರು ಕಲುಷಿತಗೊಂಡಿರುವ ಪ್ರದೇಶಗಳಿಗೆ ತಕ್ಷಣವೇ ಸರ್ಕಾರದ ವೆಚ್ಚದಲ್ಲಿ ಟ್ಯಾಂಕರ್‌ಗಳು ಅಥವಾ ಪ್ಯಾಕೇಜ್ ಮಾಡಿದ ಕುಡಿಯುವ ನೀರನ್ನು ಪೂರೈಸಬೇಕು. ಬಾಧಿತ ಪ್ರದೇಶಗಳಲ್ಲಿ ಕೂಡಲೇ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಬೇಕು. ಕಲುಷಿತ ನೀರು ಸೇವಿಸಿ ಅಸ್ವಸ್ಥರಾದವರಿಗೆ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು. ಎನ್‌ಎಬಿಎಲ್ ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರೀಕ್ಷಿಸಬೇಕು. ಕಲುಷಿತಗೊಂಡಿರುವ ಪೈಪ್‌ಲೈನ್‌ಗಳು ಮತ್ತು ಬೋರ್‌ವೆಲ್‌ಗಳ ಬಳಕೆಯನ್ನು ತಕ್ಷಣ ನಿಲ್ಲಿಸಬೇಕು.

ಮಲಿನಜಲದ ಪೈಪ್‌ಗಳು ಮತ್ತು ಕುಡಿಯುವ ನೀರಿನ ಪೈಪ್‌ಗಳು ಪಕ್ಕದಲ್ಲೇ ಇರುವ ಕಡೆಗಳಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಬೇಕು. ಆನ್‌ಲೈನ್ ಮೂಲಕ ನೀರಿನ ಗುಣಮಟ್ಟ ಮೇಲ್ವಿಚಾರಣೆ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸಿ, ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಮತ್ತು ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಾಗಿ ಹೇಳಿದೆ.

error: Content is protected !!