Friday, January 9, 2026

ಹೆತ್ತವರ ಬುದ್ಧಿಮಾತಿಗೂ ಬಗ್ಗದ ಕಿರಾತಕ: ಒನ್ ಸೈಡ್ ಲವ್ ಎಂಬ ಪೆಡಂಭೂತಕ್ಕೆ ಬಲಿಯಾದ ಅಪ್ರಾಪ್ತೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರೀತಿಸುವಂತೆ ಪೀಡಿಸುತ್ತಿದ್ದ ಯುವಕನ ಕಿರುಕುಳ ತಾಳಲಾರದೆ, 17 ವರ್ಷದ ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡಿನ ನೀಲಕಂಠ ನಗರದಲ್ಲಿ ಸಂಭವಿಸಿದೆ.

ನಂಜನಗೂಡಿನ ಸರ್ಕಾರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ದಿವ್ಯಾ (17) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ದೇಬೂರು ಗ್ರಾಮದ ಆದಿತ್ಯ ಎಂಬಾತ ದಿವ್ಯಾಳನ್ನು ಪ್ರೀತಿಸುವಂತೆ ನಿರಂತರವಾಗಿ ಪೀಡಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಕಾಲೇಜಿಗೆ ಹೋಗುವ ದಾರಿಯಲ್ಲಿ ಮತ್ತು ಇತರ ಸಂದರ್ಭಗಳಲ್ಲಿ ಆದಿತ್ಯ ನೀಡುತ್ತಿದ್ದ ಕಾಟದ ಬಗ್ಗೆ ದಿವ್ಯಾ ತನ್ನ ಪೋಷಕರಿಗೆ ಈ ಹಿಂದೆಯೇ ತಿಳಿಸಿದ್ದಳು.

ಮಗಳ ಅಳಲನ್ನು ಕೇಳಿದ ದಿವ್ಯಾಳ ತಂದೆ ಗುರುಮೂರ್ತಿಯವರು, ಆದಿತ್ಯನನ್ನು ಭೇಟಿ ಮಾಡಿ ಅಂತಹ ಕೆಲಸ ಮಾಡದಂತೆ ಕಿವಿಮಾತು ಹೇಳಿದ್ದರು. ಆದರೆ, ಪೋಷಕರ ಎಚ್ಚರಿಕೆ ಅಥವಾ ಬುದ್ಧಿವಾದಕ್ಕೆ ಕಿಂಚಿತ್ತೂ ಕ್ಯಾರೆ ಎನ್ನದ ಆದಿತ್ಯ, ತನ್ನ ವಿಕೃತ ವರ್ತನೆಯನ್ನು ಮುಂದುವರಿಸಿದ್ದ ಎನ್ನಲಾಗಿದೆ.

ಸತತ ಕಿರುಕುಳದಿಂದ ಮಾನಸಿಕವಾಗಿ ಜರ್ಜರಿತಗೊಂಡ ದಿವ್ಯಾ, ಬೇರೆ ದಾರಿ ಕಾಣದೆ ಮನೆಯಲ್ಲಿ ನೇಣು ಬಿಗಿದುಕೊಂಡು ಪ್ರಾಣ ಬಿಟ್ಟಿದ್ದಾಳೆ. ಈ ಘಟನೆಯಿಂದ ದಿವ್ಯಾ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಗಳ ಸಾವಿಗೆ ಕಾರಣನಾದ ಆದಿತ್ಯನ ವಿರುದ್ಧ ದಿವ್ಯಾಳ ತಂದೆ ಗುರುಮೂರ್ತಿ ಅವರು ನಂಜನಗೂಡು ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

error: Content is protected !!