January19, 2026
Monday, January 19, 2026
spot_img

ಮತ್ತೊಂದು ‘ಮಹಾ’ ಶರಣಾಗತಿ: ಛತ್ತೀಸ್‍ಗಢದಲ್ಲಿ 63 ನಕ್ಸಲರು ಶರಣು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‍ಗಢದ ದಾಂತೇವಾಡದಲ್ಲಿ 63 ನಕ್ಸಲರು ಸಾಮೂಹಿಕವಾಗಿ ಶರಣಾಗಿದ್ದಾರೆ. ಇದರಲ್ಲಿ 36 ನಕ್ಸಲರ ಪತ್ತೆಗೆ ಸರ್ಕಾರ 1.19 ಕೋಟಿ ರೂ. ಬಹುಮಾನ ಘೋಷಿಸಿಸಿತ್ತು.

ಅಧಿಕಾರಿಗಳ ಪ್ರಕಾರ, ಶರಣಾದ ನಕ್ಸಲರು ದಕ್ಷಿಣ ಬಸ್ತಾರ್ ವಿಭಾಗ, ಪಶ್ಚಿಮ ಬಸ್ತಾರ್ ವಿಭಾಗ ಮತ್ತು ಮಾಡ್ ವಿಭಾಗದಲ್ಲಿ ಸಕ್ರಿಯರಾಗಿದ್ದರು. ಒಡಿಶಾ ಗಡಿಯಲ್ಲಿರುವ ಪ್ರದೇಶಗಳಲ್ಲಿಯೂ ಈ ಗುಂಪು ಕಾರ್ಯನಿರ್ವಹಿಸುತ್ತಿತ್ತು. ಅವರಲ್ಲಿ ಏಳು ಜನರ ಪತ್ತೆಗೆ ತಲಾ 8 ಲಕ್ಷ ರೂ. ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಎಲ್ಲರೂ ಭದ್ರತಾ ಪಡೆಗಳ ಮುಂದೆ ಶಸ್ತ್ರಾಸ್ತ್ರಗಳನ್ನು ಒಪ್ಪಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಶರಣಾದವರನ್ನು ಕಲಹಂಡಿ ಪ್ರದೇಶ ಸಮಿತಿಯ ಕಾರ್ಯದರ್ಶಿ ಪಕ್ಲು ಅಲಿಯಾಸ್ ಪ್ರದೀಪ್ ಓಯಮ್ (45), ವಿಭಾಗೀಯ ಸಮಿತಿ ಸದಸ್ಯ ಮೋಹನ್ ಅಲಿಯಾಸ್ ಆಜಾದ್ ಕಡ್ತಿ (32), ಆತನ ಪತ್ನಿ ಭೈರಾಮರ್ ಪ್ರದೇಶ ಸಮಿತಿಯ ಕಾರ್ಯದರ್ಶಿ ಸುಮಿತ್ರಾ ಅಲಿಯಾಸ್ ದ್ರೌಪತಿ ಚಾಪಾ (30), ಪ್ಲಟೂನ್ ಪಕ್ಷದ ಸಮಿತಿ ಸದಸ್ಯ ಹಂಗಿ ಅಲಿಯಾಸ್ ರಾಧಿಕಾ ಲೇಕಮ್ (28), ಕಂಪನಿ ಸಂಖ್ಯೆ 1 ರ ಸದಸ್ಯ ಸುಖ್ರಾಮ್ ತತಿ (20), ಕಂಪನಿ ಸಂಖ್ಯೆ 7ರ ಸದಸ್ಯ ಪಾಂಡು ಮಡ್ಕಮ್ (19), ಮತ್ತು ಅದೇ ಘಟಕದ ಸೋಮ್ದು ಕಡ್ತಿ (21) ಎಂದು ಗುರುತಿಸಲಾಗಿದೆ.

ಶರಣಾದ ಎಲ್ಲಾ 63 ನಕ್ಸಲರಿಗೂ ತಲಾ 50,000 ರೂ. ತಕ್ಷಣದ ಆರ್ಥಿಕ ನೆರವು ನೀಡಲಾಗುವುದು. ಸರ್ಕಾರದ ನೀತಿಗೆ ಅನುಗುಣವಾಗಿ ಅವರಿಗೆ ಪುನರ್ವಸತಿ ಕಲ್ಪಿಸಲಾಗುತ್ತದೆ. ಶರಣಾದವರು ಮಾವೋವಾದಿ ಸಿದ್ಧಾಂತದ ಬಗ್ಗೆ ಭ್ರಮನಿರಸನಗೊಂಡಿದ್ದಾರೆ. ಅಲ್ಲದೇ ರಾಜ್ಯ ಸರ್ಕಾರದ ಶರಣಾಗತಿ ಮತ್ತು ಪುನರ್ವಸತಿ ನೀತಿಯಿಂದ ಪ್ರೇರಿತರಾಗಿದ್ದಾರೆ ಎಂದು ದಾಂತೇವಾಡ ಪೊಲೀಸ್ ವರಿಷ್ಠಾಧಿಕಾರಿ ಗೌರವ್ ರೈ ಹೇಳಿದ್ದಾರೆ.

Must Read