Sunday, January 11, 2026

ಪ್ರಧಾನಿ ಮೋದಿ ಜೊತೆ ಮಾತುಕತೆ: ನಮ್ಮ ಚಿಂತನೆ ಹರಿತಗೊಳಿಸಲು ಈ ಭೇಟಿ ಸಹಕಾರಿ ಎಂದ ಸ್ಟಾರ್ಟಪ್​ಗಳ ಮುಖಂಡರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಮ್ಮ ನಿವಾಸಕ್ಕೆ 12 ಸ್ಟಾರ್ಟಪ್​ಗಳ ಮುಖಂಡರನ್ನು ಕರೆಸಿ ವಿಚಾರ ವಿನಿಮಯ ಮಾಡಿದ್ದಾರೆ.

ಫೆಬ್ರುವರಿಯಲ್ಲಿ ಇಂಡಿಯಾ ಎಐ ಇಂಪ್ಯಾಕ್ಟ್ ಸಮಿಟ್ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ಪೂರ್ವಭಾವಿಯಾಗಿ ಪ್ರಧಾನಿ 12 ಸ್ಟಾರ್ಟಪ್​ಗಳ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆಸಿ ವಿಚಾರ ವಿನಿಮಯ ಮಾಡಿದ್ದಾರೆ.

ಪ್ರಧಾನಿಯನ್ನು ಭೇಟಿ ಮಾಡಿರುವ ಎಐ ಸ್ಟಾರ್ಟಪ್​ಗಳು ಇಂಡಿಯಾ ಎಐ ಮಿಷನ್ ಅಡಿಯಲ್ಲಿ ಫೌಂಡೇಶನ್ ಮಾಡಲ್​ಗಳನ್ನು ಅಭಿವೃದ್ಧಿಪಡಿಸಲು ಆಯ್ಕೆಯಾಗಿರುವಂಥವಾಗಿವೆ.

ಐಟಿ ಮತ್ತು ಎಲೆಕ್ಟ್ರಾನಿಕ್ಸ್ ಸಚಿವ ಡಾ. ಅಶ್ವಿನಿ ವೈಷ್ಣವ್, ರಾಜ್ಯ ಸಚಿವರಾದ ಜಿತಿನ್ ಪ್ರಸಾದ, ಕಾರ್ಯದರ್ಶಿ ಎಸ್ ಕೃಷ್ಣನ್ ಹಾಗೂ ಈ 12 ಸ್ಟಾರ್ಟಪ್​ಗಳ ಮುಖಂಡರು ಪ್ರಧಾನಿಗಳೊಂದಿಗೆ ಮಾತನಾಡಿದ್ದಾರೆ.

ಪ್ರಧಾನಮಂತ್ರಿಗಳು ತಮ್ಮ ನಿಜಜೀವನದ ಅನುಭವಗಳೊಂದಿಗೆ ಮಾತನಾಡಿದ್ದು ನಮಗೆ ತಾಂತ್ರಿಕ ವಿಷಯಗಳ ಬಗ್ಗೆ ಪ್ರೇರಣೆ ಕೊಟ್ಟಿತು ಎಂದು ಸರ್ವಂ ಎಐ ಸಹ-ಸಂಸ್ಥಾಪಕ ಡಾ. ಪ್ರತ್ಯೂಶ್ ಕುಮಾರ್ ಹೇಳಿದ್ದಾರೆ.

ಪ್ರಧಾನಿಯವರಿಗೆ ತಾನು ಏನು ಹೇಳುತ್ತಿದ್ದೇನೆ ಎನ್ನುವ ಸ್ಪಷ್ಟ ಅರಿವು ಇದೆ. ಭಾರತ ಎಐನಲ್ಲಿ ವಿಶ್ವಗುರು ಆಗಬೇಕಾದರೆ ವಿಶ್ವಕ್ಕೆ ಯಾವುದನ್ನು ಪರಿಹರಿಸಲು ಸಾಧ್ಯವಿಲ್ಲವೋ ಆ ಸಮಸ್ಯೆ ಬಗೆಹರಿಸಬೇಕು ಎನ್ನುತ್ತಾರೆ. ಅವರೊಂದಿಗೆ ಮಾತನಾಡಿದ್ದು ಖುಷಿಯಾಯಿತು ಎಂದು ಟೆಕ್ ಮಹೀಂದ್ರ ಸಿಇಒ ನಿಖಿಲ್ ಮಲ್ಹೋತ್ರಾ ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಧಾನಿಯವರ ಅನುಭವವು ನಮ್ಮ ಚಿಂತನೆಯನ್ನು ಹರಿತಗೊಳಿಸಲು ಸಹಾಯವಾಯಿತು. ಭಾರತಕ್ಕೆ ಏನು ಬೇಕು ಎಂಬುದನ್ನು ಅವರಿಗಿಂತ ತಿಳಿದವರು ಯಾರೂ ಇಲ್ಲ. ನಾವು ಪಾಶ್ಚಿಮಾತ್ಯರನ್ನು ನಕಲು ಮಾಡುವುದು ಬೇಡ. ನಮಗೆ ಏನು ಬೇಕೋ, ಏನು ಅಗತ್ಯವೋ ಅದನ್ನು ನಿರ್ಮಿಸಬೇಕು ಎಂಬುದು ಅವರ ನಿಲುವು ಎಂದು ನ್ಯೂರೋಡಿಎಕ್ಸ್ ಸಿಇಒ ಡಾ. ಸಿದ್ಧಾರ್ಥ್ ಪನ್ವರ್ ವಿವರಿಸಿದ್ದಾರೆ.

ಪ್ರಧಾನಿಗಳ ವಿಶನ್ ಗಮನಿಸಿ ಅಮೆರಿಕದಿಂದ ಭಾರತಕ್ಕೆ ಬಂದಿದ್ದೇನೆ. ಅಮೆರಿಕದಲ್ಲಿ ಅವಕಾಶಗಳು ಸಿಗುತ್ತವೆ. ಆದರೆ, ಭಾರತದಲ್ಲೂ ಮಾಡಲ್ ನಿರ್ಮಿಸಲು ಫಂಡಿಂಗ್ ಸಿಗುತ್ತದೆ ಎನ್ನುವುದು ಉತ್ತೇಜನಕಾರಿ ಸಂಗತಿ ಎಂದು ಗ್ಯಾನ್ ಎಐನ ರಿಸರ್ಚ್ ಎಂಜಿನಿಯರ್ ಆಗಿರುವ ಪಾರ್ಥಸಾರಥಿ ತಿಳಿಸಿದ್ದಾರೆ.

ಇಂಡಿಯಾ ಎಐ ಮಿಷನ್​ನಲ್ಲಿ ಆಯ್ಕೆಯಾಗಿರುವ 12 ಸ್ಟಾರ್ಟಪ್​ಗಳು ಅವತಾರ್, ಭಾರತ್​ಜೆನ್, ಫ್ರಾಕ್ಟಲ್, ಗ್ಯಾನ್, ಜೆನ್​ಲೂಪ್, ಜ್ಞಾನಿ, ಇಂಟೆಲಿಹೆಲ್ತ್, ಸರ್ವಂ, ಶೋಧ್ ಎಐ, ಸಾಕೆಟ್ ಎಐ, ಟೆಕ್ ಮಹೀಂದ್ರ ಮತ್ತು ಝೆನ್​ಟೀಕ್ ಆಗಿವೆ.

error: Content is protected !!