Sunday, January 11, 2026

ಚಳಿ…ಚಳಿ…ಚಳಿ: ಶ್ರೀನಗರದಲ್ಲಿ ಮೈನಸ್ 6 ಡಿಗ್ರಿ ಸೆಲ್ಸಿಯಸ್, ಗುಲ್ಮಾರ್ಗ್‌ನಲ್ಲಿ ಮೈನಸ್ 7.2 ಡಿಗ್ರಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್‌ನಾದ್ಯಂತ ಶೀತಗಾಳಿ ತೀವ್ರತೆ ಹೆಚ್ಚಳವಾಗಿದ್ದು, ಶ್ರೀನಗರ, ಗುಲ್ಮಾರ್ಗ್ ಮತ್ತು ಡ್ರಾಸ್ ಈ ಋತುವಿನ ಅತ್ಯಂತ ಕಡಿಮೆ ತಾಪಮಾನವನ್ನು ದಾಖಲಿಸಿವೆ.

ಕಾಶ್ಮೀರ ಹಾಗೂ ಶ್ರೀನಗರದಲ್ಲಿ ಕನಿಷ್ಠ ತಾಪಮಾನ ಮೈನಸ್ 6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಶ್ರೀನಗರ ವಿಮಾನ ನಿಲ್ದಾಣದಲ್ಲಿ ತಾಪಮಾನ ಇನ್ನೂ ಕಡಿಮೆಯಾಗಿದ್ದು, ಮೈನಸ್ 7.4 ಡಿಗ್ರಿ ದಾಖಲಾಗಿದೆ. ಉತ್ತರ ಕಾಶ್ಮೀರದ ಪ್ರಸಿದ್ಧ ಸ್ಕೀ ರೆಸಾರ್ಟ್ ಮತ್ತು ಪ್ರವಾಸಿ ತಾಣ ಗುಲ್ಮಾರ್ಗ್‌ನಲ್ಲಿ ಮೈನಸ್ 7.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಶೋಪಿಯಾನ್ ಮೈನಸ್ 7.7 ಡಿಗ್ರಿ ತಾಪಮಾನದೊಂದಿಗೆ ಕಾಶ್ಮೀರದ ಅತ್ಯಂತ ಶೀತ ಸ್ಥಳಗಳಲ್ಲಿ ಒಂದಾಗಿ ಹೊರಹೊಮ್ಮಿತು. ಇವುಗಳಂತೆಯೇ ಪಹಲ್ಗಾಮ್ ಮೈನಸ್ 7.6 ಡಿಗ್ರಿ ಮತ್ತು ಪುಲ್ವಾಮಾ ಮೈನಸ್ 7.5 ಡಿಗ್ರಿ ತಾಪಮಾನವನ್ನು ಹೊಂದಿದೆ.

ಅನಂತ್‌ನಾಗ್‌ನಲ್ಲಿ ಮೈನಸ್ 7.1 ಡಿಗ್ರಿ ಮತ್ತು ಸೋಪೋರ್‌ನಲ್ಲಿ ಮೈನಸ್ 6.8 ಡಿಗ್ರಿ ತಾಪಮಾನ ದಾಖಲಾಗಿದೆ. ಕುಪ್ವಾರಾ, ಬಾರಾಮುಲ್ಲಾ ಮತ್ತು ಬುಡ್ಗಾಮ್‌ನಲ್ಲಿಯೂ ಸಹ ತೀವ್ರ ಶೀತ ದಾಖಲಾಗಿದ್ದು, ಕನಿಷ್ಠ ತಾಪಮಾನ ಮೈನಸ್ 5.7 ಮತ್ತು ಮೈನಸ್ 5.9 ಡಿಗ್ರಿಗಳ ನಡುವೆ ಇದೆ.

ಜಮ್ಮು ನಗರದಲ್ಲಿ ಕನಿಷ್ಠ 5.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಜಮ್ಮು ವಿಮಾನ ನಿಲ್ದಾಣದಲ್ಲಿ -6.7 ಡಿಗ್ರಿ ದಾಖಲಾಗಿದೆ. ಅದಾಗ್ಯೂ, ಈ ಪ್ರದೇಶದ ಹಲವಾರು ಗುಡ್ಡಗಾಡು ಜಿಲ್ಲೆಗಳಲ್ಲಿ ಘನೀಕರಿಸುವ ಪರಿಸ್ಥಿತಿ ಕಂಡುಬಂದಿದೆ.

ಲಡಾಖ್ ಅತ್ಯಂತ ಶೀತ ಪ್ರದೇಶವಾಗಿ ಉಳಿದಿದೆ. ಡ್ರಾಸ್ ಮತ್ತೊಮ್ಮೆ ವಿಶ್ವದ ಅತ್ಯಂತ ಶೀತ ಜನವಸತಿ ಸ್ಥಳಗಳಲ್ಲಿ ಒಂದೆಂಬ ಖ್ಯಾತಿಗೆ ಪಾತ್ರವಾಗಿದೆ. ಪಟ್ಟಣದಲ್ಲಿ ಮೈನಸ್ 24.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಪದುಮ್‌ನಲ್ಲಿ ಮೈನಸ್ 20.3 ಡಿಗ್ರಿ, ನಯೋಮಾದಲ್ಲಿ ಮೈನಸ್ 21.6 ಡಿಗ್ರಿ ದಾಖಲಾಗಿದೆ. ಲೇಹ್‌ನಲ್ಲಿ ಕನಿಷ್ಠ ಮೈನಸ್ 14.4 ಡಿಗ್ರಿ ಮತ್ತು ಹ್ಯಾನ್ಲೆಯಲ್ಲಿ ಮೈನಸ್ 16.2 ಡಿಗ್ರಿ ತಾಪಮಾನ ದಾಖಲಾಗಿದೆ. ನುಬ್ರಾ ಕಣಿವೆ, ಕಾರ್ಗಿಲ್ ಮತ್ತು ಟ್ಯಾಂಗ್ಸ್ಟೆಯಲ್ಲಿ ತಾಪಮಾನವು ಮೈನಸ್ 13 ಡಿಗ್ರಿಗಿಂತ ಕಡಿಮೆಯಾಗಿದೆ.

ಜನವರಿ 22 ರವರೆಗೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಶೀತ ಮತ್ತು ಶುಷ್ಕ ಹವಾಮಾನ ಮುಂದುವರಿಯುವ ಸಾಧ್ಯತೆಯಿದೆ. ಜನವರಿ 16 ರಿಂದ 20 ರವರೆಗೆ ಮೋಡ ಕವಿದ ವಾತಾವರಣವಿರುತ್ತದೆ’ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ.

ಜನವರಿ 10 ರವರೆಗೆ ಕನಿಷ್ಠ ತಾಪಮಾನದಲ್ಲಿ ಮತ್ತಷ್ಟು ಇಳಿಕೆಯಾಗಲಿದೆ. ನಂತರ ರಾತ್ರಿಯ ತಾಪಮಾನವು ಕ್ರಮೇಣ 1 ರಿಂದ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

error: Content is protected !!